ಚಾಮರಾಜನಗರ: ಹಕ್ಕುಪತ್ರ ಕೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಕ್ಷಮೆಯಾಚನೆ ಮಾಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕೆಂಪಮ್ಮ ಎಂಬ ಮಹಿಳೆಯ ಕಪಾಳಕ್ಕೆ ಹೊಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಕೊಳ್ಳೇಗಾಲದಲ್ಲಿ ಅವರು ಮಾತನಾಡಿ, 45 ವರ್ಷ ಹಲವು ಏಳುಬೀಳು ಕಂಡಿದ್ದೇನೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರಿಗಾದರು ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಂಗಳದ ಘಟನೆ ಘಟನೆಯೇ ಅಲ್ಲ, ಹೆಣ್ಣು ಮಗಳು ಪದೇ ಪದೆ ವೇದಿಕೆ ಮೇಲೆ ಬರ್ತಾ ಇದ್ದರು. ಎಷ್ಟು ಸಾರಿ ಬರ್ತೀಯಾ ತಾಯಿ ಅಂತ ವಿಚಾರಿಸಿದೆ, ನಿನ್ನ ಸಮಸ್ಯೆ ಬಗೆಹರಿಸ್ತೇನೆ ಎಂದು ಕೈಯಿಂದ ಪಕ್ಕಕ್ಕೆ ಸರಿಸಿದ್ದೇನೆ ಅಷ್ಟೇ ವಿನಃ ಇನ್ನೇನು ಉದ್ದೇಶ ಇರಲಿಲ್ಲ. ಹೆಣ್ಣು ಮಕ್ಕಳ ಬಗ್ಗೆ ನನಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಪ್ರತಿಯೊಬ್ಬರನ್ನು ಅಮ್ಮ, ತಾಯಿ ಎಂದೇ ಕರೆಯುತ್ತೇನೆ. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
ರಾಜೀನಾಮೆಗೆ ವಾಟಾಳ್ ಆಗ್ರಹ: ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡುವವರು ಯಾರೂ ಈ ರೀತಿ ವರ್ತನೆ ತೋರಬಾರದು. ಈಗಾಗಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಹಾಗಾದಾಗ ಮಾತ್ರ ರಾಜಕೀಯಕ್ಕೆ, ಅವರ ಸ್ಥಾನಕ್ಕೆ, ಪ್ರಜಾಪ್ರಭುತ್ವಕ್ಕೆ ಗೌರವ ಸಿಗುತ್ತಿತ್ತು. ಸರ್ಕಾರ ಕೂಡ ಈ ಬಗ್ಗೆ ಯಾವ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ