ಚಾಮರಾಜನಗರ: ಎರಡು ಬಾರಿ ವರ್ಗಾವಣೆ ರದ್ದಾಗಿ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಎತ್ತಂಗಡಿಯಾದ ಡಾ.ಎಂ.ಆರ್.ರವಿ ಮತ್ತೆ ಚಾಮರಾಜನಗರಕ್ಕೆ ಜಿಲ್ಲಾಧಿಕಾರಿಯಾಗುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದ ಜೊತೆಗೆ ಅಧಿಕಾರಿ ವಲಯದಲ್ಲೂ ಜೋರಾಗಿ ಕೇಳಿಬಂದಿದೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಡಾ.ಎಂ.ಆರ್.ರವಿ ವರ್ಗಾವಣೆಯಾದರೂ ಇನ್ನೂ ಅವರಿಗೆ ಸ್ಥಳ ತೋರಿಸದಿರುವುದು, ಜೊತೆಗೆ ತಮ್ಮ ಡಿಸಿ ವಸತಿ ತೊರೆಯದಿರುವುದು ಈ ಚರ್ಚೆಗೆ ಸಾಕಷ್ಟು ಪುಷ್ಟಿ ನೀಡುತ್ತಿದೆ.
ಕೊರೊನಾ ಎರಡನೇ ಅಲೆ ವೇಳೆ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ದುರಂತ ನಡೆದ ಬಳಿಕ ಡಾ.ಎಂ.ಆರ್.ರವಿ ಕಾರ್ಯವೈಖರಿ ವಿರುದ್ಧ ನಿರಂತರ ಪ್ರತಿಭಟನೆಯೂ ನಡೆದಿತ್ತು. ಬಳಿಕ, ವರ್ಗಾವಣೆ ಆದೇಶ ಹೊರಡಿಸಿದರಾದರೂ ಕೆಲವೇ ಗಂಟೆಗಳಲ್ಲಿ ರದ್ದಾಗಿ ಚಾಮರಾಜನಗರದಲ್ಲೇ ಡಿಸಿಯಾಗಿ ಮುಂದುವರೆದಿದ್ದರು. ಇದೀಗ ರವಿ ಅವರೇ ಮತ್ತೆ ಬರಲಿದ್ದು, ವರ್ಗಾವಣೆ ಆದೇಶಕ್ಕೆ ಸಿಎಂ ಅಂತಿಮ ಸಹಿಯೊಂದೇ ಬಾಕಿಯೆಂಬ ಮಾತು ಕೇಳಿಬಂದಿದ್ದು ಪರ-ವಿರೋಧ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
ಒಂದು ಮಾಹಿತಿ ಪ್ರಕಾರ, ಚಾಮರಾಜನಗರಕ್ಕೆ ಮತ್ತೆ ನಿಯೋಜನೆಯಾಗುವ ವಿಶ್ವಾಸದಿಂದಲೇ ಡಿಸಿ ಇನ್ನೂ ಬೀಳ್ಕೊಡುಗೆ ಪಡೆದಿಲ್ಲ ಅಷ್ಟೇ ಅಲ್ಲ, ಜಿಲ್ಲಾಧಿಕಾರಿ ಅಧಿಕೃತ ನಿವಾಸವನ್ನು ಕೂಡಾ ತೆರವು ಮಾಡಿಲ್ಲ ಎನ್ನಲಾಗುತ್ತಿದೆ.