ಚಾಮರಾಜನಗರ: ಗೌರಿ - ಗಣೇಶ ಹಬ್ಬ ಬಂತೆಂದರೆ ಮನೆಗಳಲ್ಲಿ ಕಡುಬು, ಮೋದಕದ ಘಮ ಹರಡುವುದು ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ ಮಾತ್ರ ಗೌರಿಹಬ್ಬದ ದಿನದಂದು ವಿಶಿಷ್ಟ ಬಗೆಯ ಸಾಂಬಾರು ಮಾಡಿ ಹಿರಿಯರಿಗೆ ಎಡೆ ಹಾಕುವ ಸಂಪ್ರದಾಯವನ್ನು ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಗೌರಿ ಹಬ್ಬದ ದಿನದಂದು ಎಡೆ ಹಾಕುವ ಸಂಪ್ರದಾಯ ನಡೆದುಕೊಂಡು ಬಂದಿದ್ದು ಇಂಡಿ - ಬೇಳೆ ಸಾರು ಎಂಬ ವಿಶೇಷ ಸಾಂಬಾರ್ ಮಾಡಿ ಹಿರಿಯರಿಗೆ ನೈವೇದ್ಯ ಮಾಡಿ ಬಳಿಕ ಮನೆಮಂದಿ ಊಟ ಮಾಡುತ್ತಾರೆ. ಉಮ್ಮತ್ತೂರಿನ ಕೆಲವು ಪಾಳೇಗಾರರ ಮನೆತನಗಳು, ಸೈನಿಕ ಕುಟುಂಬಗಳು ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ಇಂಡಿ - ಬೇಳೆ ಸಾರು, ತಂಬಿಟ್ಟು ಎಡೆ ಇಟ್ಟು ಅವರನ್ನು ಸ್ಮರಿಸುತ್ತಾರೆ.
ಎಡೆಯಿಟ್ಟು ಸ್ಮರಣೆ:
ಮೈಸೂರು ರಾಜರ ಆಳ್ವಿಕೆಯಿದ್ದಾಗ ಉಮ್ಮತ್ತೂರು ಗ್ರಾಮಗಳಲ್ಲಿ ಪಾಳೇಗಾರರು ಆಡಳಿತವಿತ್ತು ಹಾಗೂ ಹೆಚ್ಚಿನ ಮಂದಿ ಸೈನ್ಯದಲ್ಲಿದ್ದರು. ಯುದ್ಧಕ್ಕೆ ತೆರಳುವ ಮುನ್ನ ಪಾಳೇಗಾರರು ಮತ್ತು ಸೈನಿಕರು ತಾವು ಹಿಂತಿರುಗಿ ಬರದಿದ್ದರೆ ತಮ್ಮನ್ನು ಗೌರಿ ಹಬ್ಬದಂದು ಕುಟುಂಬಸ್ಥರು ಸ್ಮರಿಸಬೇಕೆಂದು ಹೇಳಿದ್ದರು. ಕೆಲವು ಪಾಳೇಗಾರರು ಹಿಂತಿರುಗದಿದ್ದರಿಂದ ಅವರಿಗೆ ಎಡೆಯಿಟ್ಟು ಅವರನ ಸ್ಮರಿಸಿ ಗ್ರಾಮಕ್ಕೆ ಮತ್ತು ತಮ್ಮ ಕುಟುಂಬಕ್ಕೆ ಒಳಿತಾಗಬೇಕೆಂದು ಹಬ್ಬದ ರಾತ್ರಿ ಪ್ರಾರ್ಥಿಸುತ್ತಾರೆ.
ಪಾಳೇಗಾರರ ಮೂರ್ತಿಗಳಿರುವ ಪಕ್ಕದಲ್ಲೇ ಸಿದ್ದೇಶ್ವರ ಸ್ವಾಮಿ ದೇಗುಲವಿದ್ದು, ಅಲ್ಲೂ ಕೂಡ ವಿಶೇಷ ಪೂಜೆ ನಡೆಯಲಿದೆ ಎಂದು ಚೆನ್ನವೀರಗೌಡರ ಮನೆತನದ ಉಮ್ಮತ್ತೂರು ಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಗ್ರಾಮದಲ್ಲಿನ ಪಟೇಲ್ ಮನೆತನ, ಚೆನ್ನವೀರಗೌಡರ ಮನೆತನ, ಸಿದ್ದೇಗೌಡರ ಮನೆತನದ ಕುಟುಂಬಸ್ಥರು, ಸಂಬಂಧಿಕರು ಈ ಸ್ಮರಣೆಯಲ್ಲಿ ಭಾಗಿಯಾಗುತ್ತಾರೆಂದು ಅವರು ತಿಳಿಸಿದರು.
ಇಂಡಿ - ಬೇಳೆ ಸಾರು ವಿಶೇಷ:
ಪಾಳೇಗಾರರ ಕುಟುಂಬಸ್ಥರು ಎಡೆ ಹಾಕಲು ಇಂಡಿ-ಬೇಳೆ ಸಾರನ್ನು ಮಾಡಲಿದ್ದು, ಈ ಸಾರನ್ನು ಕೇವಲ ಗೌರಿ ಹಬ್ಬದ ದಿನದಂದು ಮಾತ್ರ ತಯಾರಿಸಲಾಗುತ್ತದೆ. ಬದನೆಕಾಯಿ, ನುಗ್ಗೆಸೊಪ್ಪು, ಕೊತ್ತಂಬರಿ ಸೊಪ್ಪು, ಸಣ್ಣ ಈರುಳ್ಳಿ, ಮೆಣಸು, ಕರಿಎಳ್ಳು, ಬೇಳೆ ಹಾಕಿದ ಇಂಡಿ- ಬೇಳೆ ಸಾರು ಮಾಡಿ ಅನ್ನದೊಂದಿಗೆ ಸೇವಿಸಲಾಗುತ್ತದೆ. ಗೌರಿ ಹಬ್ಬ ಬಂತೆಂದರೆ ಮೋದಕ, ಕರಿಕಡುಬಿನ ಸಾಮಾನ್ಯವಾದರೆ ಇಲ್ಲಿ ಇಂಡಿ-ಬೇಳೆ ಸಾರಿನ ಪರಿಮಳ ಹರಡಿರುತ್ತದೆ. ಜೊತೆಗೆ, ಸೈನಿಕರನ್ನೂ ನೆನೆಯುವ ವಿಶಿಷ್ಟ ಸಂಪ್ರದಾಯ ನಿಜಕ್ಕೂ ಗಮನ ಸೆಳೆಯುತ್ತದೆ.