ಚಾಮರಾಜನಗರ: ತರಕಾರಿ ಬೆಲೆ ನಾಲ್ಕೈದು ಪಟ್ಟು ಹೆಚ್ಚಾಗಿರುವುದಕ್ಕೆ ಒಂದು ಕಡೆ ಜನ ಬೆಸತ್ತರೆ, ಇನ್ನೊಂದೆಡೆ ಈ ಬೆಲೆಯಿಂದ ರೈತರಿಗೂ ಲಾಭವಾಗುತ್ತಿಲ್ಲ- ಗ್ರಾಹಕರಿಗೂ ಕಡಿಮೆ ಬೆಲೆಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ.
ಎಪಿಎಂಸಿ ಮಾರುಕಟ್ಟೆಯಲ್ಲಿ 3 ರೂ. ಕೆಜಿಗೆ ಟೊಮ್ಯಾಟೊ ಸಿಕ್ಕರೆ, ಕೈಗಾಡಿಯಲ್ಲಿ 20-25 ರೂ. ಆಗಿದೆ. 3 ರೂ. ಉದ್ದನೆ ಬದನೆ ಕಾಯಿಯನ್ನು ಗ್ರಾಹಕರು 15 ರೂ.ಗೆ ಕೊಳ್ಳಬೇಕಾಗಿದೆ. 25 ರೂ. ಬೀನ್ಸ್ 60 ರ ಗಡಿ ದಾಟಿದೆ. 20 ರೂ. ಕ್ಯಾರೆಟ್ಗೆ 40-45 ರೂ. ಕೊಡಲೇಬೇಕಿದ್ದು, ಲಾಕ್ಡೌನ್ನಿಂದ ದಲ್ಲಾಳಿಗಳು ಕೃತಕ ಬೇಡಿಕೆ ಸೃಷ್ಟಿಸಿದ್ದಾರೆ.
ದಂಟು, ಮೆಂತ್ಯ, ಕೊತ್ತಂಬರಿ, ಸಬ್ಬಸಿಗೆ ಸೊಪ್ಪಿನ ಕಂತೆಗಳನ್ನು 2 ರೂ. ಗೆ ತಂದು 10 ರೂ.ಗೆ ಮಾರುತ್ತಿದ್ದು, ಈರುಳ್ಳಿ, ಕ್ಯಾಪ್ಸಿಕಂ, ಮೆಣಸಿಕಾಯಿ 5-6 ಪಟ್ಟು ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿದೆ. ಏರಿರುವ ತರಕಾರಿ ಬೆಲೆಗೆ ಜನರು ಕಂಗಲಾಗಿದ್ದಾರೆ.
![ತರಕಾರಿ ಬೆಲೆಗೆ ಗ್ರಾಹಕರು ಕಂಗಾಲು!](https://etvbharatimages.akamaized.net/etvbharat/prod-images/kn-cnr-02-apmc-avb-7202614_31032020121952_3103f_00689_881.jpg)
ಡಿಸಿ ಭೇಟಿ: ಇಂದು ಎಪಿಎಂಸಿ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಭೇಟಿ ನೀಡಿ, ರೈತರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಎಲ್ಲರೂ ಮಾಸ್ಕ್, ಕರವಸ್ತ್ರ ಬಳಸಬೇಕೆಂದು ತಿಳಿ ಹೇಳಿದರು. ಅಗತ್ಯ ವಸ್ತುಗಳ ವಾಹನ ಸಂಚರಿಸಲು ಯಾವುದೇ ನಿರ್ಭಂಧವಿಲ್ಲ. ರೈತರಿಗೆ ಪಾಸ್ ಇಲ್ಲದೆಯೋ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ನೀಡುವಂತೆ ಸೂಚಿಸುತ್ತೇನೆ ಎಂದರು. ಇದೇ ವೇಳೆ, ಸಂಕಷ್ಟದ ಸಮಯದಲ್ಲಿ ಬೆಲೆ ಏರಿಕೆ ಮಾಡದೇ ಜನರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದರು.