ಚಾಮರಾಜನಗರ: ನಾನು ಯಾವುದೇ ದಂಧೆಯಲ್ಲಿ ತೊಡಗಿಲ್ಲ, ಲೂಟಿ ಹೊಡೆದಿಲ್ಲ, ಜೂಜಾಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ನನಗೆ ಒಂದು ವೋಟ್ ಕೊಡಿ ಎಂದು ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ವಾಟಾಳ್ ನಾಗರಾಜ್ ಜಿಲ್ಲೆಯ ಮತದಾರರಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ಗ್ರಾ.ಪಂ ಸದಸ್ಯರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಒಂದು ಮತ ನನಗೆ ಕೊಡಿ, ಇನ್ನೊಂದು ವೋಟು ನೀವು ಯಾರಿಗಾದರೂ ಹಾಕಿಕೊಳ್ಳಿ. ಗ್ರಾ.ಪಂ ಸದಸ್ಯರು ಯಾವುದೇ ಒತ್ತಡ, ಆಮಿಷಕ್ಕೆ ಒಳಗಾಗದೇ ನನಗೊಂದು ಮತ ಹಾಕಬೇಕೆಂದು ಕೋರಿದರು.
ನಾನು ಗೆದ್ದ ಕೂಡಲೇ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಮೊದಲ ದಿನವೇ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಹೋರಾಡುತ್ತೇನೆ. ಗ್ರಾ.ಪಂ ಸದಸ್ಯರಿಗೆ 5 ಸಾವಿರ, ಉಪಾಧ್ಯಕ್ಷರಿಗೆ 7.5 ಸಾವಿರ ಹಾಗೂ ಅಧ್ಯಕ್ಷರಿಗೆ 10 ಸಾವಿರ ರೂ. ಗೌರವಧನ ಕೊಡಿಸುತ್ತೇನೆ ಎಂದು ವಾಟಾಳ್ ಭರವಸೆ ಕೊಟ್ಟರು.
ಗೌರವಧನ ಉದ್ದಿನ ವಡೆಗೂ ಸಾಲಲ್ಲ:
ಗೌರವಧನ ಒಂದು ದಿನಕ್ಕೆ ಈಗ 32 ರೂ. ನಿಗದಿಯಾಗಿದೆ. ಆದರೆ, ಒಂದು ಉದ್ದಿನ ವಡೆಗೆ 60 ರೂ. ಇದೆ. ಉದ್ದಿನವಡೆ ತಿನ್ನಬೇಕೆಂದರೆ ಇನ್ನೊಬ್ಬ ಮೆಂಬರ್ ಅನ್ನು ಜೊತೆಗೆ ಕರೆದುಕೊಂಡು ಬೈಟ್ ಟೂ ತಿನ್ನಬೇಕು. ಒಬ್ಬ ಮಂತ್ರಿ ಹೇಳ್ತಾರೆ ಬಿಜೆಪಿಗೆ ಮತ ಹಾಕಿದರೆ 10 ರೂ. ಗೌರವಧನ ಕೊಡುತ್ತೇವೆಂದು, ಅವರ ನಾಲಿಗೆಗೆ ಮಾನ, ಮರ್ಯಾದೆ ಇಲ್ಲ ಎಂದು ಹೆಸರು ಹೇಳದೇ ಸಚಿವ ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ಬುದ್ಧ, ಬಸವ, ಅಂಬೇಡ್ಕರ್, ಮಹಾವೀರ ಇವರು ಕಾಲಾತೀತರು: ಸಿಎಂ ಬೊಮ್ಮಾಯಿ
ದಿನಕ್ಕೆ ಕೊಡಬೇಕಿರುವ 32 ರೂ. ಅನ್ನು ಸರ್ಕಾರ ನೀಡದೇ 7-8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ. ಹಾಗಾಗಿ, ಸದಸ್ಯರು ಪ್ರಾಮಾಣಿಕವಾಗಿ ನನಗೊಂದು ಮತ ನೀಡಬೇಕು ಎಂದರು. ಎಲ್ಲ ಪಕ್ಷವು ಓರ್ವ ಸಾಕು ಎಂದು ಒಬ್ಬೊಬ್ಬರನ್ನು ನಿಲ್ಲಿಸಿದೆ. ಎರಡನೇ ಅವನು ನಾನೇ. ಹಾಗಾಗಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.