ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಉತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಬಿಡಬೇಕೆಂದು ಪ್ರತಿಭಟಿಸುತ್ತಿರುವ ರೈತರ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಕೂಡ ಮುಂದುವರೆದಿದೆ.
ಈ ನಡುವೆ ಫೇಸ್ಬುಕ್ನಲ್ಲಿ ರೈತ ಸಂಘದ ಮುಖಂಡ ಡಾ. ಗುರುಪ್ರಸಾದ್ ಹಾಗೂ ಶಾಸಕ ನಿರಂಜನ್ ಕುಮಾರ್ ಬೆಂಬಲಿಗರು ಮತ್ತು ಸಚಿವ ಪುಟ್ಟರಂಗಶೆಟ್ಟಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೆರೆಗೆ ನೀರು ತುಂಬಿಸದ ಶಾಸಕ ನಿರಂಜನ್ ಕುಮಾರ್ ತೊಲಗಲಿ ತೊಲಗಲಿ, ರೈತ ವಿರೋಧಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮನೆಗೆ ಹೋಗಲಿ ಎಂದು ಪೋಸ್ಟ್ ಹಾಕಿದ್ದ ರೈತ ಮುಖಂಡ ಗುರುಪ್ರಸಾದ್ ವಿರುದ್ಧ ಪಕ್ಷಗಳ ಬೆಂಬಲಿಗರು ಗರಂ ಆಗಿ ರೈತ ಸಂಘದ ವಿರುದ್ಧ ಕಾಮೆಂಟ್ ಹಾಕುತ್ತಿದ್ದಾರೆ.
ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಪೋಸ್ಟ್ ಕುರಿತು ಫೇಸ್ಬುಕ್ ಹುಲಿಗಳಾ ಪ್ರತಿಭಟನಾ ಜಾಗಕ್ಕೆ ಬನ್ನಿ ಎಂದು ತಮ್ಮ ಪೋಸ್ಟ್ ವಿರುದ್ಧ ಕಾಮೆಂಟ್ ಮಾಡಿದ್ದವರನ್ನು ಗುರುಪ್ರಸಾದ್ ಝಾಡಿಸಿದ್ದಾರೆ.
ಫೇಸ್ಬುಕ್ನಲ್ಲಿ ಟಾಕ್ವಾರ್ ಮುಂದುವರೆಯುತ್ತಲೇ ಇದೆ. ಉತ್ತೂರು ಕೆರೆಯಂಗಳದಲ್ಲಿ ರೈತರ ಪ್ರತಿಭಟನೆ ತೀವ್ರತೆ ಪಡೆಯುತ್ತಿದ್ದು, ಇಂದು ತಮ್ಮ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.