ಚಾಮರಾಜನಗರ: ನಾಡು ಉಳಿಯಬೇಕಾದರೆ ಮೊದಲು ಭಾಷೆ ಉಳಿಯಬೇಕು. ಕರ್ನಾಟಕದಲ್ಲಿ ಕನ್ನಡವೇ ಸೌರ್ವಭೌಮ ಭಾಷೆ. ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡ ಭಾಷೆ ಅನುಷ್ಠಾನಗೊಳಿಸಬೇಕೆನ್ನುವುದು ಸರ್ಕಾರದ ಆಶಯ. ಆದರೆ ಕರ್ನಾಟಕ ಸರ್ಕಾರದ ಆಡಳಿತ ವಿವಿಧ ಇಲಾಖೆಗಳು ಆಡಳಿತದಲ್ಲಿ ಇಂದು ಕನ್ನಡ ಭಾಷೆ ಬಳಕೆಯಲ್ಲಿ ನಿರ್ಲಕ್ಷ್ಯ ತೋರುತ್ತಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಈ ಪ್ರಮಾದ ಎಸೆದ ಆರೋಪ ಎದುರಿಸುತ್ತಿದೆ. ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕನ್ನಡ ಮಾಯವಾಗಿದೆ. ಆದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆಯೂ ವಾಹನ ನಿಲುಗಡೆಗಾಗಿ ನೀಡುವ ರಶೀದಿ ಸಂಪೂರ್ಣ ಆಂಗ್ಲಭಾಷೆಯಲ್ಲಿದೆ ಎಂದು ಸಫಾರಿಗರೊಬ್ಬರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು ದೂರಿದ್ದಾರೆ.
ಪ್ರವಾಸಿಗರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್ಚೆತ್ತಕೊಂಡು, ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಅರಣ್ಯ ಇಲಾಖೆಗೆ ಪತ್ರ ಬರೆದು ಕಡ್ಡಾಯವಾಗಿ ಕನ್ನಡ ಬಳಸುವಂತೆ ಸೂಚಿಸಿದೆ.
ಮುಖ್ಯ ಅರಣ್ಯಸಂರಕ್ಷಣಾಧಿಕಾರಿಗೆ ಪತ್ರ: ಬಂಡೀಪುರ ಸಫಾರಿ ವಾಹನ ನಿಲುಗಡೆ, ಹಲವು ಫಲಕಗಳಲ್ಲಿ ಕನ್ನಡವನ್ನು ಬಳಸುತ್ತಿಲ್ಲ, ಕನ್ನಡ ಬಳಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಇ-ಮೇಲ್ ಕಳುಹಿಸಿ ಹಾಗೂ ಎಕ್ಸ್‌ನಲ್ಲಿ ಟ್ಯಾಗ್ ಸಹ ಮಾಡಿದ್ದರು.
ಅರವಿಂದಶರ್ಮಾ ಅವರ ದೂರಿಗೆ ಸ್ಪಂದಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಕನ್ನಡ ಕಡ್ಡಾಯವಾಗಿ ಬಳಸಲು ನಿರ್ದೇಶನ ನೀಡಿದೆ. 1963 ರಾಜಭಾಷಾ ಅನ್ವಯ ಕರ್ನಾಟಕದ ಎಲ್ಲಾ ಇಲಾಖೆಗಳು ಆಡಳಿತವಾಗಿ, ವ್ಯವಹಾರಿಕವಾಗಿ ಕನ್ನಡ ಬಳಸಬೇಕು, ಸಂಪೂರ್ಣ ಕನ್ನಡ ಬಳಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಪ್ರಾಧಿಕಾರ ತಿಳಿಸಿದೆ.