ಚಾಮರಾಜನಗರ : ಜಿಲ್ಲೆಯಲ್ಲಿ ವೀಕೆಂಡ್ ಮೋಜಿನ ನಡುವೆ 6 ಪ್ರತ್ಯೇಕ ಅಪಘಾತ ಪ್ರಕರಣ ಸಂಭವಿಸಿವೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಂಡ್ಲುಪೇಟೆ ಸುರಭಿ ಹೋಟೆಲ್ ಸಮೀಪ ಪಾದಾಚಾರಿಗೆ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದು ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮನೆಗೆ ನಡೆದು ಹೋಗುತ್ತಿದ್ದ ಪಟ್ಟಣದ ಗೋಪಾಲಶೆಟ್ಟಿ (52) ಎಂಬುವರು ಮೃತ ಪಟ್ಟಿದ್ದಾರೆ.
ಇನ್ನು ಬೇಗೂರು ಸಮೀಪದ ಹಳ್ಳದಮಾದಹಳ್ಳಿ ಗೇಟ್ನಲ್ಲಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಹಸಗೂಲಿ ಗ್ರಾಮದ ಸವಾರ ವೀರಭದ್ರಸ್ವಾಮಿ(42) ಎಂಬುವರು ಮೃತಪಟ್ಟಿದ್ದಾರೆ. ಹೊರೆಯಾಲ ಗೇಟ್ನಲ್ಲಿ ಅಪರಿಚಿತ ಕಾರು ಡಿಕ್ಕಿಯಾಗಿ ಬೆಳಚವಾಡಿ ಗ್ರಾಮದ ಹೊಣಕಾರ (45) ಎಂಬುವರು ಆಸ್ಪತ್ರೆಗೆ ರವಾನಿಸುವಾಗ ಕೊನೆಯುಸಿರೆಳೆದಿದ್ದಾರೆ.
ಬಸ್ ಪಲ್ಟಿ, ಟ್ರಾಕ್ಟರ್-ಕಾರು ಮುಖಾಮುಖಿ : ಹನೂರು ತಾಲೂಕಿನ ಕಾಮಗೆರೆ ಸಮೀಪ ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಬೈಕ್ ಸವಾರನಿಗೆ ಡಿಕ್ಕಿ ಹೊಡೆಯಲು ತಪ್ಪಿಸಲು ಹೋಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, 11 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಲೋಟಸ್ ಶಾಲೆ ಸಮೀಪ ಕಾರು ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡರೆ, ಮರಿಯಾಲ ಸೇತುವೆ ಬಳಿ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವನಪ್ಪಿದವರು ಬಹುತೇಕ ಮಂದಿ ಬೈಕ್ ಸವಾರರೇ ಆಗಿದ್ದಾರೆ.