ಚಾಮರಾಜನಗರ: ಲಾಕ್ಡೌನ್ನಿಂದ ಜಿಲ್ಲಾಸ್ಪತ್ರೆಗೆ ಹೋಗಲಾಗದೇ ಪರದಾಡುವ ರೋಗಿಗಳಿಗೆ ಜಿಲ್ಲಾಡಳಿತ ಇಂದಿನಿಂದ ಟೆಲಿಮೆಡಿಸಿನ್ ಆರಂಭಿಸಿದೆ.
ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಸಲಹೆ, ಸೂಚನೆ ಪಡೆದು ಅಗತ್ಯವಿದ್ದರೆ ಮಾತ್ರ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ಸಲುವಾಗಿ ಟೆಲಿಮೆಡಿಸಿನ್ ಸೇವೆ ಆರಂಭಿಸಲಾಗುತ್ತಿದೆ. ಹೃದ್ರೋಗ, ಮಧುಮೇಹ, ಚರ್ಮರೋಗ, ಸ್ತ್ರೀ ರೋಗ, ಶಿಶು ಸಂಬಂಧಿ ಕಾಯಿಲೆ ಕುರಿತು ಸುಲಭವಾಗಿ ತಜ್ಞರ ಜೊತೆ ಸಾರ್ವಜನಿಕರು ಸಮಾಲೋಚಿಸಬಹುದಾಗಿದೆ.
ವಿಡಿಯೋ ಕಾಲ್ ಮೂಲಕ ರೋಗಿಯ ವಿವರ, ರೋಗ, ರೋಗದ ಸ್ಥಿತಿ ಕುರಿತು ಸಾರ್ವಜನಿಕರು ವೈದ್ಯರಿಂದ ಮಾಹಿತಿ ಪಡೆಯಬಹುದು. ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದೇ ಅಥವಾ ಜಿಲ್ಲಾಸ್ಪತ್ರೆಗೆ ಕರೆದು ತರಬೇಕೇ ಎಂಬುದನ್ನು ವೈದ್ಯರು ಸೂಚಿಸುತ್ತಾರೆ.
ಸದ್ಯ ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆ ಮತ್ತು ಸಂತೇಮರಹಳ್ಳಿ, ಕಬ್ಬಹಳ್ಳಿ ಹಾಗೂ ಬೇಗೂರು ಸಮುದಾಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಸೇವೆ ಇಂದಿನಿಂದ ಆರಂಭಿಸಲಾಗಿದೆ.