ಚಾಮರಾಜನಗರ: ಜಾನಪದ ನಾಡು ಚಾಮರಾಜನಗರವು ವೈವಿಧ್ಯಮಯ ಜಾತ್ರೆ, ಆಚರಣೆಯಿಂದ ಗಮನ ಸೆಳೆಯುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೆ, ಎರಡು ಗ್ರಾಮಗಳಲ್ಲಿ ಜಾತ್ರೆ ನಡೆದಿದ್ದು, ಒಂದರಲ್ಲಿ ನಿಗಿನಿಗಿ ಕೆಂಡ ದೇವರಿಗೆ ನೈವೇದ್ಯವಾದರೆ, ಮತ್ತೊಂದು ಊರಲ್ಲಿ ಮುಳ್ಳಿನ ಬೇಲಿಗೆ ಭಕ್ತರು ಹಾರಿದ್ದಾರೆ.
ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಗ್ರಾಮದ ಸತ್ಯವತಿ ಜಾತ್ರೆ ನಡೆದಿದ್ದು "ಉರಿಯುವ ಕೆಂಡವನ್ನು ಅರ್ಚಕ ಬರಿಗೈಯಲ್ಲಿ ಕೊಳಗಕ್ಕೆ ತುಂಬಿ ಬಳಿಕ ಜೋಳಿಗೆಗೆ ಸುರಿದುಕೊಂಡು ನಂತರ ಗರ್ಭಗುಡಿಯಲ್ಲಿನ ದೇವರಿಗೆ ನೈವೇದ್ಯ" ಇಡಲಾಗುತ್ತದೆ. ರೋಮಾಂಚಕಕಾರಿಯಾದ ಈ ದೃಶ್ಯವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡು ಅತೀಂದ್ರಿಯ ಶಕ್ತಿಗೆ ತಲೆ ಬಾಗಿದ್ದಾರೆ. ಬರಿಗೈಯಲ್ಲಿ ಕೆಂಡ ಸುರಿದರೂ ಅರ್ಚಕನ ಕೈ ಸುಡುವುದಿಲ್ಲವಂತೆ, ಬಟ್ಟೆಯ ಜೋಳಿಗೆಗೆ ಏನೂ ಆಗುವುದಿಲ್ಲ. ಈ ಜಾತ್ರೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಎಲ್ಲರನ್ನೂ ಅಚ್ಚರಿಗೆ ನೂಕುವ ಈ ಆಚರಣೆ ಸತ್ಯವತಿ ದೇವರ ಪವಾಡ ಎಂಬುದು ಜನರ ನಂಬಿಕೆಯಾಗಿದೆ.
ಮುಳ್ಳಿನ ಬೇಲಿಗೆ ಹಾರಿದ ಭಕ್ತರು : ಗ್ರಾಮದೇವತೆ ಹಬ್ಬ ಬಂತೆಂದರೆ ಭರ್ಜರಿ ಊಟ, ನೃತ್ಯ, ದೇವರ ಪೂಜೆ, ಬಾಯಿಗೆ ಬೀಗ ಇರುವುದು ಸಾಮಾನ್ಯ. ಆದರೆ, ಇಲ್ಲಿ ಹತ್ತಾರು ಭಕ್ತರು ಮುಳ್ಳಿನ ಬೇಲಿಗೆ ಹಾರಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಮಾರಮ್ಮನ ಹಬ್ಬದ ಪ್ರಯುಕ್ತ ಉರುಕಾತಮ್ಮ, ಕುಂಟು ಮಾರಮ್ಮ, ಮಂಟೇಸ್ವಾಮಿ ಸೇರಿ ನಾನಾ ದೇವರನ್ನು ಪೂಜಿಸುವ ಭಕ್ತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪೂಜೆ- ಪುನಸ್ಕಾರ, ಮಡೆ, ನೈವೇದ್ಯ ಅರ್ಪಿಸಿ ಸಂಜೆ ವೇಳೆಗೆ ದೇವಾಲಯದ ಮುಂಭಾಗ ಇರುವ ಜಮೀನಿನ ಮುಳ್ಳಿನ ಬೇಲಿಗೆ ಹಾರಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.
ನೂರಾರು ಮಂದಿಯನ್ನು ಅಚ್ಚರಿಗೊಳಿಸುವ ಪವಾಡ : ಮೊದಲಿಗೆ ಗ್ರಾಮ ದೇವತೆಗಳ ಪ್ರತಿನಿಧಿಗಳು ಎನಿಸಿಕೊಂಡವರು ಸುತ್ತಿಗೆ, ಸುರಾಪಾನಿ ಹಿಡಿದು ದೇವಾಲಯ ಪ್ರದಕ್ಷಿಣೆ ಹಾಕುವಾಗ ದೇವರು ಮೈಮೇಲೆ ಬಂದಂತಾಗಿ ಓಡಿ ಬಂದು ಮುಳ್ಳಿನ ಬೇಲಿಗೆ ಹಾರುತ್ತಾರೆ. ಅದೇ ರೀತಿ, ಕೆಲ ಭಕ್ತರೂ ದೇವರನ್ನು ಸಂತುಷ್ಟಗೊಳಿಸಲು ಮುಳ್ಳಿನ ಬೇಲಿಗೆ ಹಾರಿದರು. ಅಲ್ಲೇ ಇದ್ದ ಯುವಕರು ಅವರನ್ನು ಮೇಲಕ್ಕೆತ್ತಿದ್ದರು. ರಭಸದಿಂದ ಓಡಿ ಬರುವ ಭಕ್ತರು ಮುಳ್ಳಿನ ಬೇಲಿಗೆ ಹಾರಿದರೂ ರಕ್ತ ಬರುವುದಾಗಲಿ, ನೋವಾಗುವುದಾಗಲಿ ಆಗದಿರುವುದು ಸೇರಿದ್ದ ನೂರಾರು ಮಂದಿಯನ್ನು ಅಚ್ಚರಿಗೆ ನೂಕಿತು.
ಕೊಂಗಳ್ಳಿ ಬೆಟ್ಟದಲ್ಲಿ ಕೆಂಡೋತ್ಸವ : ಚಾಮರಾಜನಗರ ಹಾಗೂ ತಮಿಳುನಾಡು ಗಡಿಯಲ್ಲಿರುವ ಕೊಂಗಳ್ಳಿ ಬೆಟ್ಟದಲ್ಲಿ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ಕೆಂಡೋತ್ಸವ ಇಂದು ನಡೆಯಿತು. ಎರಡು ರಾಜ್ಯಗಳಿಂದ ಕೊಂಗಳ್ಳಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನಸ್ವಾಮಿ ಮಹಾನ್ ತಪಸ್ಸು ಮಾಡಲು ಈ ಪ್ರದೇಶ ಆರಿಸಿಕೊಂಡಿದ್ದರಿಂದ ದೇಗುಲಕ್ಕೆ ಮಹಿಳೆಯರ ಪ್ರವೇಶ ಇಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ಊರಿನಲ್ಲಿ ಉತ್ಸವ ನಡೆಯಲಿದ್ದು, ಆಗ ಮಾತ್ರ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸುವ ವಿಶಿಷ್ಠ ಸಂಪ್ರದಾಯ ಇಲ್ಲಿನದ್ದಾಗಿದೆ.
ಇದನ್ನೂ ಓದಿ : ಅದ್ದೂರಿಯಾಗಿ ಜರುಗಿದ ಸದ್ಗುರು ಶ್ರೀ ಯೋಗಿ ನಾರೇಯಣ ರಥೋತ್ಸವ