ಚಾಮರಾಜನಗರ: ಪ್ರತ್ಯೇಕ ಪ್ರಕರಣದಲ್ಲಿ ಒಂದೇ ದಿನ ಬಾವಿಗೆ ಬಿದ್ದಿದ್ದ ಮೂವರನ್ನು ರಕ್ಷಿಸಿರುವ ಘಟನೆ ಹನೂರು ಪಟ್ಟಣ ಹಾಗೂ ಕೊಳ್ಳೇಗಾಲದ ಕುಣಗಳ್ಳಿಯಲ್ಲಿ ಶನಿವಾರ ನಡೆದಿದೆ.
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣ ಸಮೀಪದಲ್ಲಿರುವ ತೋಟವೊಂದರಲ್ಲಿರುವ ಬಾವಿಯಲ್ಲಿ ದೊರೆಸ್ವಾಮಿ (21), ಕುಮಾರ (60) ಎಂಬುವರು ಆಕಸ್ಮಿಕವಾಗಿ ಬಿದ್ದಿದ್ದರು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.
ಅಂದಾಜು 70 ಅಡಿ ಅಳ ಹಾಗೂ 30 ಅಡಿ ಕೊಳಚೆ ನೀರು ತುಂಬಿದ್ದ ಬಾವಿಗೆ ಇವರಿಬ್ಬರು ಆಕಸ್ಮಿಕವಾಗಿ ಬಿದ್ದಿದ್ದರು ಎನ್ನಲಾಗಿದೆ. ಸದ್ಯ, ಇಬ್ಬರಿಗೂ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೃದ್ಧೆಯ ರಕ್ಷಣೆ: ಕೊಳ್ಳೇಗಾಲ ನಗರ ಸಮೀಪದ ಕುಣಗಹಳ್ಳಿಯ ರಸ್ತೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಮುಡಿಗುಂಡ ನಿವಾಸಿ ಚಂದ್ರಮ್ಮ(60) ಎಂಬವರನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ವಾಕಿಂಗ್ ಮಾಡಲು ತೆರಳಿದ್ದ ವೇಳೆ ಬಾವಿಗೆ ಬಿದ್ದಿದ್ದರು ಎನ್ನಲಾಗ್ತಿದೆ.