ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನಲ್ಲಿ ದಿನಸಿ, ತರಕಾರಿ ಖರೀದಿ ವೇಳೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಪ್ರತಿನಿತ್ಯ ಬೆಳಿಗ್ಗೆ 6ರಿಂದ 10ರವರೆಗೆ ದಿನಸಿ ಮತ್ತು ತರಕಾರಿಗಳನ್ನು ಕೊಳ್ಳಲು ಅಂಗಡಿಗಳು ತೆರೆದಿರುತ್ತವೆ. ಆದರೆ ಜನರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದೇ ಸಾಮಾಗ್ರಿ ಕೊಂಡುಕೊಳ್ಳಲು ಮುಗಿಬೀಳುತ್ತಿದ್ದಾರೆ. ಮಾಲೀಕರು ನಿಯಮಗಳನ್ನು ಪಾಲಿಸುವಂತೆ ಹೇಳಿದರು ಸಹ ಜನರು ಕೇಳುತ್ತಿಲ್ಲ. ಪೊಲೀಸರು ಕಂಡೂ ಕಾಣದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ರೈತರಿಗೆ ಉಪಯೋಗವಾಗಲಿ ಎಂದು ಜಿಲ್ಲಾಡಳಿತ ರಸಗೊಬ್ಬರ ಮತ್ತು ಕ್ರಿಮಿನಾಶಕ ಅಂಗಡಿಗಳನ್ನು ಸಂಜೆಯವರೆಗೂ ತೆರೆಯುವಂತೆ ಆದೇಶ ನೀಡಿದೆ. ಆದರೆ ಇಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಮಾಲೀಕರು ಸಹ ಅಂತರವನ್ನು ಕಾಯ್ದುಕೊಂಡು ಪದಾರ್ಥಗಳನ್ನು ಪಡೆದುಕೊಳ್ಳಲು ಹೇಳುತ್ತಿಲ್ಲ. ಗುಂಪುಗೂಡಿದ್ದರು ಸಹ ವ್ಯವಹಾರ ನಡೆಸುತ್ತಾರಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸರು ಕಟ್ಟುನಿಟ್ಟಾಗಿ ಆದೇಶ ಪಾಲನೆ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಬೇಕು. ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ತಹಶೀಲ್ದಾರ್ ನಂಜುಂಡಯ್ಯ ಮತ್ತು ತಂಡ ಪರಿಶೀಲನೆ ಮಾಡುವ ವೇಳೆ ರಾಸಾಯನಿಕ ಗೊಬ್ಬರದ ಅಂಗಡಿ ಮುಂಭಾಗ ಅನೇಕರು ಗುಂಪುಗಟ್ಟಿ ಖರೀದಿ ಮಾಡುತ್ತಿದ್ದರು. ಈ ವೇಳೆ ತಹಶೀಲ್ದಾರ್ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳಿದರು.