ಚಾಮರಾಜನಗರ: ಸಾರಿಗೆ ಸಂಸ್ಥೆ ನೌಕರರು ಒಂದೆಡೆ ಮುಷ್ಕರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಬಸ್ ಮಾಲೀಕರು ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿ ನಡುವೆ ತಿಕ್ಕಾಟ ನಡೆಯುತ್ತಿದ್ದು, ಸರ್ಕಾರಿ ಬಸ್ಗೆ ಪ್ರಯಾಣಿಕರನ್ನು ಹತ್ತಿಸಲು ಬಿಡದ ಘಟನೆ ನಗರದಲ್ಲಿ ನಡೆಯುತ್ತಿದೆ.
ಮುಷ್ಕರದ ನಡುವೆ ಸರ್ಕಾರಿ ಬಸ್ಗಳು ಸೇವೆ ನೀಡಲು ಆರಂಭಿಸಿದ ಹಿನ್ನೆಲೆ ಕುಪಿತರಾದ ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಸರ್ಕಾರಿ ಬಸ್ನಲ್ಲಿ ತೆರಳಿದರೆ ತಮಗೆ ನಷ್ಟ ಆಗಲಿದೆ. ಮುಷ್ಕರದ ಸಮಸ್ಯೆ ಬಗೆಹರಿಯುವವರೆಗೂ ಬಸ್ ಬಿಡುವುದು ಸರಿಯಲ್ಲ. ಹತ್ತಾರು ಸಾವಿರ ಖರ್ಚು ಮಾಡಿ ಬಸ್ ಓಡಿಸುತ್ತಿದ್ದು, ಇದರಿಂದ ತಮಗೆ ನಷ್ಟ ಉಂಟಾಗಲಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಕೆಎಸ್ಆರ್ಟಿಸಿ ಬಸ್ನಲ್ಲಿ ಹತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಖಾಸಗಿ ಬಸ್ಗಳಲ್ಲಿ ಬಲವಂತದಿಂದ ಹತ್ತಿಸಿಕೊಂಡು ಸಂಚಾರ ನಡೆಸುತ್ತಿದ್ದು, ಕೆಲ ಪೊಲೀಸರು, ನಿಲ್ದಾಣದ ಟಿಸಿಗಳೇ ಖಾಸಗಿ ಬಸ್ಗೆ ಜನರನ್ನು ಹತ್ತಿಸಿ ಕೋಪ ಶಮನ ಮಾಡುತ್ತಿದ್ದಾರೆ. ಸರ್ಕಾರಿ ಬಸ್ ಬಾಗಿಲ ಬಳಿ ಖಾಸಗಿ ಬಸ್ ನಿರ್ವಾಹಕರು ನಿಂತುಕೊಂಡು ಬರುವ ಪ್ರಯಾಣಿಕರನ್ನು ಖಾಸಗಿ ಬಸ್ಗಳಿಗೆ ಹತ್ತಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸರ್ಕಾರಿ ಬಸ್ನಲ್ಲಿ ತೆರಳಿದರೆ ಬೇಗ ಊರಿಗೆ ಹೋಗಬಹುದು. ಖಾಸಗಿ ಬಸ್ಗಳು ಹಲವು ಸ್ಟಾಪ್ಗಳಲ್ಲಿ ನಿಲ್ಲಿಸಿಕೊಂಡು ಹೋಗುತ್ತಾರೆ. ಇಷ್ಟವಿಲ್ಲದಿದ್ದರೂ ಖಾಸಗಿ ಬಸ್ನಲ್ಲೇ ಹೋಗಬೇಕಿದ್ದು, ಸರ್ಕಾರಿ ಬಸ್ಗೆ ಹತ್ತಲು ಬಿಡುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು.