ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಪ್ರಾಣ ಬಿಟ್ಟ ಬಳಿಕ ಜಿಲ್ಲಾಸ್ಪತ್ರೆಯ ಆಕ್ಸಿಜನ್ ಸಮಸ್ಯೆ ಬಗೆಹರಿದಿದ್ದು, ಇದೀಗ ಆಕ್ಸಿಜನ್ ಬೆಡ್ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 50 ಐಸಿಯು, 75 ಆಕ್ಸಿಜನೇಟೆಡ್, 43 ಜನರಲ್ ಸೇರಿದಂತೆ ಎಲ್ಲಾ 168 ಬೆಡ್ಗಳು ಭರ್ತಿಯಾಗಿವೆ. ಇದರಿಂದ ತೀವ್ರ ತರಹದ ರೋಗ ಲಕ್ಷಣವುಳ್ಳ ಆಕ್ಸಿಜನ್ ಅಗತ್ಯ ಇರುವ ರೋಗಿಗಳಿಗೆ ಬೆಡ್ ದೊರೆಯುವುದು ಅನುಮಾನವಾಗಿದೆ. ಒಂದು ದುರಂತ ಕಣ್ಣ ಮುಂದೆ ಇದ್ದರೂ ಇನ್ನೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿಲ್ಲ. ಸೋಂಕಿತರನ್ನು ಇತರ ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಿಸುವ ಬಗ್ಗೆ ಜಿಲ್ಲಾಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕರ್ನಾಟಕ ಮುಕ್ತ ವಿವಿ ಅಧ್ಯಯನ ಕೇಂದ್ರ ಹಾಗೂ ಮಾದಾಪುರ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಾಸ್ಟೆಲ್ನಲ್ಲಿ 85 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ, ಅಲ್ಲಿಗೆ ಸೋಂಕಿತರನ್ನು ಶಿಫ್ಟ್ ಮಾಡುವ ಕಾರ್ಯ ಆಗಿಲ್ಲ. ಸದ್ಯ, ಈ ಕೇಂದ್ರಗಳಲ್ಲಿ ಕೇವಲ ನಾಲ್ಕು ಮಂದಿ ಸೋಂಕಿತರು ಮಾತ್ರ ಇದ್ದಾರೆ. ಉಳಿದಂತೆ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರಿನಲ್ಲಿರುವ ಕೋವಿಡ್ ಕೇರ್ ಸೆಂಟರ್ಗಳಿಗೆ ಇದುವರೆಗೆ ಯಾವ ಸೋಂಕಿತರನ್ನು ದಾಖಲು ಮಾಡಿಲ್ಲ.
ಓದಿ : ಚಾಮರಾಜನಗರ ಆಕ್ಸಿಜನ್ ದುರಂತ.. ಬೇಸರಗೊಂಡು ರಾಜೀನಾಮೆಗೆ ಮುಂದಾಗಿದ್ದರೇ ಸಚಿವ ಸುರೇಶ್ ಕುಮಾರ್..!!?
ಪ್ರತಿದಿನ ಪತ್ತೆಯಾಗುವ ಹೊಸ ಸೋಂಕಿತರನ್ನು ಈ ಕೇರ್ ಸೆಂಟರ್ಗಳಿಗೆ ದಾಖಲಿಸದೆ ಹೋಂ ಐಸೋಲೇಷನ್ಗೆ ಕಳುಹಿಸಲಾಗುತ್ತಿದೆ. ಹೋಂ ಐಸೋಲೇಷನ್ನಲ್ಲಿರುವವರು ಉಸಿರಾಟದ ಸಮಸ್ಯೆಯಿಂದ ಬಳಲಿ ಜಿಲ್ಲಾಸ್ಪತ್ರೆಗೆ ಬಂದರೆ, ಇಲ್ಲಿ ಬೆಡ್ ಸಿಗುತ್ತಿಲ್ಲ. ಬುಧವಾರ ರಾತ್ರಿ ಓರ್ವ ಯುವಕ ಹಾಗೂ ಗುರುವಾರ ಬೆಳಗ್ಗೆ ಓರ್ವ ವ್ಯಕ್ತಿ ಸೇರಿ ಇಬ್ಬರು ಬೆಡ್ ಸಿಗದೆ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ 10 ಮಂದಿ ಸೋಂಕಿತರು ಆಕ್ಸಿಜನ್ ಬೆಡ್ ಸಿಗದೆ ಅಸುನೀಗಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.