ಕೊಳ್ಳೇಗಾಲ : ತಾಲೂಕಿನ ಟಗರಪುರ ಗ್ರಾಮದ ಯುವತಿಯೊರ್ವಳು ಸ್ನೇಹಿತೆ ನೋಡಿಕೊಂಡು ಬರುತ್ತೇನೆಂದು ಹೋಗಿ ಪ್ರೀತಿಸಿದ್ದವನೊಂದಿಗೆ ವಿವಾಹವಾಗಿ ಪೊಲೀಸ್ ಠಾಣೆಗೆ ಮೆಟ್ಟಿಲೇರಿದ್ದಾಳೆ.
ತಾಲೂಕಿನ ಟಗರಪುರ ಗ್ರಾಮದ ಅಂಕನಾಥ್ ಎಂಬುವರ ಪುತ್ರಿ ಅನುಪಮ (24) ನಾಪತ್ತೆಯಾಗಿದ್ದ ಯುವತಿ. ಈಕೆ ಮಾ. 7 ರಂದು ಕೊಳ್ಳೇಗಾಲದ ಸ್ನೇಹಿತೆಯನ್ನು ನೋಡಿಕೊಂಡು ಬರುವುದಾಗಿ ಪೋಷಕರಿಗೆ ತಿಳಿಸಿ ಹೋದವಳು ಸಂಜೆಯಾದರೂ ವಾಪಸ್ ಬರದಿರುವುದಕ್ಕೆ ಪೋಷಕರು ಆತಂಕಗೊಂಡಿದ್ದರು. ಸಂಜೆ ವೇಳೆ ತಾನು ಫೋನ್ ಮಾಡಿ ನಾನು ಬೆಂಗಳೂರಿನಲ್ಲಿ ಇದ್ದೇನೆ ಎಂದು ತಿಳಿಸಿ ಅಷ್ಟಕೆ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ನಾಪತ್ತೆಯಾಗಿದ್ದಳು. ಈ ಹಿನ್ನೆಲೆ ತಂದೆ ಅಂಕನಾಥ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ಮಗಳನ್ನು ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದರು.
ಆದರೆ, ಮನೆಯಿಂದ ಹೊರ ಬಂದ ಯುವತಿ ನೇರವಾಗಿ ಉಗನಿಯ ಗ್ರಾಮದ ಬಳಿ ಇರುವ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ತಾನು ಪ್ರೀತಿಸುತ್ತಿದ್ದ ಲೊಕ್ಕನಹಳ್ಳಿ ಗ್ರಾಮದ ಮಣಿಕಂಠನ ಜೊತೆ ಮದುವೆಯಾಗಿದ್ದಾಳೆ. ಇವರಿಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರರಾಗಿದ್ದು, ಅಂತರ್ಜಾತಿ ವಿವಾಹವಾಗಿದೆ.
ಮಣಿಕಂಠನು ಖಾಸಗಿ ಕಚೇರಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅನುಪಮ ಕಾಲೇಜಿನಲ್ಲಿ ಓದುತ್ತಿರುವಾಗಲೇ ಕಳೆದ ಮೂರು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಒಂದು ಕಡೆ ತಂದೆ ನಾಪತ್ತೆಯಾಗಿದ್ದ ಮಗಳ ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರೆ, ಮತ್ತೊಂದು ಕಡೆ ಮಗಳು ಪ್ರೀತಿಸಿದವನ ಕೈ ಹಿಡಿದು ಠಾಣೆಗೆ ಹಾಜರಾಗಿದ್ದಾಳೆ.
ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ವಿ.ಸಿ.ಅಶೋಕ್ ಇಬ್ಬರನ್ನು ವಿಚಾರಣೆ ಮಾಡಿ ಕಳುಹಿಸಿದ್ದಾರೆ.