ಚಾಮರಾಜನಗರ: ಕೊಳ್ಳೇಗಾಲ- ಬೆಂಗಳೂರು ರೈಲ್ವೆ ಯೋಜನೆಗೆ ಆಗ್ರಹಿಸಿ ವ್ಯಕ್ತಿಯೋರ್ವ ಕೊಳ್ಳೇಗಾಲ ತಾಲೂಕು ಕಚೇರಿ ಮುಂಭಾಗ ಏಕಾಂಗಿ ಧರಣಿ ನಡೆಸಿದರು.
ಈ ವೇಳೆ ಅವರು ಸಂಸದ ವಿ. ಶ್ರೀನಿವಾಸ ಪ್ರಸಾದ್, ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ಪ್ರಧಾನಿ ಮೋದಿಗೆ ಧಿಕ್ಕಾರವೆಂಬ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಬಡವರಿಗೆ, ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ರೈಲ್ವೆ ಯೋಜನೆಯನ್ನು ಜಾರಿಗೊಳಿಸದೇ ಗಡಿಜಿಲ್ಲೆಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಅವರು ಅಸಮದಾನ ಹೊರಹಾಕಿದರು.
ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕೊಳ್ಳೇಗಾಲ-ಬೆಂಗಳೂರು ಮಾರ್ಗ ರೈಲ್ವೆ ಸಂಚಾರಕ್ಕೆ ಅನುಮೋದನೆಯಾಗಿದ್ದರೂ ಸಹ ಬಿಜೆಪಿ ಸರ್ಕಾರ ಅದನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರು ಪ್ರಸ್ತುತ ತಮ್ಮದೇ ಸರ್ಕಾರವಿದ್ದರೂ ರೈಲ್ವೆ ಯೋಜನೆಯ ಅನುಷ್ಠಾನಕ್ಕೆ ತರಲು ಮನಸ್ಸು ಮಾಡುತ್ತಿಲ್ಲ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ ಅನುಕೂಲವಾಗಲಿದೆ. ಇನ್ನಾದರೂ ಸರ್ಕಾರ ಕೂಡಲೇ ಇಲ್ಲಿಗೆ ರೈಲ್ವೆ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.