ಚಾಮರಾಜನಗರ: ಕೊರೊನಾ ಕರಿಛಾಯೆಯ ಬಳಿಕ ಆರಂಭವಾದ ಪದವಿ ತರಗತಿಗಳತ್ತ ಬರಲು ವಿದ್ಯಾರ್ಥಿಗಳು ಮನಸ್ಸು ಮಾಡದೇ ಕೇವಲ ಇಬ್ಬರು ವಿದ್ಯಾರ್ಥಿನಿಯರಿಗೆ ಬೋಧನೆ ಮಾಡಿದ ಘಟನೆ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಡೆದಿದೆ.
ಅಂತಿಮ ವರ್ಷದ ಬಿಎ 73, ಬಿಎಸ್ಸಿ 41, ಬಿಬಿಎ 22, ಬಿಕಾಂನ 79, ಎಂಎ ವಿಭಾಗದ 16 ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರು ಬಿಎಸ್ಸಿ ವಿದ್ಯಾರ್ಥಿನಿಯರು ಮಾತ್ರ ಹಾಜರಾಗಿ ಕೆಮಿಸ್ಟ್ರಿ ಪಾಠ ಕೇಳಿದ್ದಾರೆ. ಆನ್ಲೈನ್ ತರಗತಿಗೆ 32 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಸರ್ಕಾರಿ ಕಾಲೇಜಿಗೆ ಹೋಲಿಸಿದರೆ ಡಿಪ್ಲೊಮಾ, ಖಾಸಗಿ ಪದವಿ ಕಾಲೇಜು, ಬಿಎಡ್ನಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೆಚ್ಚು ಬರುತ್ತಿದ್ದಾರೆ.
9 ವಿದ್ಯಾರ್ಥಿಗಳಿಗೆ ಕೊರೊನಾ: ಇನ್ನು ಜಿಲ್ಲೆಯ 1526 ವಿದ್ಯಾರ್ಥಿಗಳು ಹಾಗೂ 340 ಸಿಬ್ಬಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 9 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.