ಚಾಮರಾಜನಗರ: ಕಾಡಿನ ಮಕ್ಕಳಿಗೂ ಜನತಂತ್ರದ ಹಬ್ಬ ತಮ್ಮದೆಂಬ ಅಭಿಮಾನ ಬಂದು ಮತದಾನ ಮಾಡಬೇಕೆಂಬ ಉದ್ದೇಶದಿಂದ ಜಿಪಂ ಸಿಇಒ ಲತಾಕುಮಾರಿ ವಿನೂತನ ಐಡಿಯಾಗೆ ಮೊರೆ ಹೋಗಿದ್ದಾರೆ.
ಹಾಡಿಗಳಲ್ಲಿ ಸ್ಥಾಪಿಸುವ, ಸಂಪ್ರದಾಯ ಮತ್ತು ಪರಂಪರೆ ಬಿಂಬಿಸುವ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಕೂಡ ಗಿರಿಜನರ ವೇಷ ಭೂಷಣ ಧರಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಗುಂಡ್ಲುಪೇಟೆಯ ಮದ್ದೂರು ಕಾಲನಿ, ಚಾಮರಾಜನಗರದ ಕೆ.ಗುಡಿ, ಹನೂರಿನ ಕೊನನಕೆರೆ ಹಾಗೂ ಬಿಳಿಗಿರಿರಂಗನ ಬೆಟ್ಟದಲ್ಲಿನ ಪುರಾಣಿಪೋಡಿನ ಮತಗಟ್ಟೆಗಳು ಎತ್ನಿಕ್ ಬೂತ್ಗಳಾಗಿವೆ. ಇಲ್ಲಿನ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಗಿರಿಜನರಂತೆ ಸೊಪ್ಪುಗಳು, ಪಕ್ಷಿಗಳ ಗರಿಗಳನ್ನು ಧರಿಸಲಿದ್ದಾರೆ.
![Idea of CEO](https://etvbharatimages.akamaized.net/etvbharat/images/kn-cnr-ethnic-polling-surendra_13042019112429_1304f_00324_1104.jpg)
ಈ ಕುರಿತು ಜಿ.ಪಂ. ಸಿಇಒ ಲತಾಕುಮಾರಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಸಾಂಸ್ಕೃತಿಕ ಮತಗಟ್ಟೆ ಸ್ಥಾಪನೆಯೊಂದಿಗೆ ಸಿಬ್ಬಂದಿ ಕೂಡಾ ಗಿರಿಜನರಂತೆ ವೇಷಭೂಷಣ ತೊಡಲಿದ್ದಾರೆ. ಹಾಡಿಯ ಜನರು ಮತಗಟ್ಟೆಗೆ ಬರಲು ಇದು ಪ್ರೇರೇಪಿಸುತ್ತದೆ. ನಮ್ಮವರು ಎಂಬ ಭಾವನೆ ಬರಲಿದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಮಹತ್ವದ ಕಾರ್ಯವಾದ ಚುನಾವಣೆಗೆ ಜಿಲ್ಲೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದು, ಶೇಕಡವಾರು ಮತದಾನ ಹೆಚ್ಚಾಗುವ ನಿರೀಕ್ಷೆ ಇದೆ.