ಚಾಮರಾಜನಗರ: ಜಿಲ್ಲಾದ್ಯಂತ ಒಂದೇ ಸಮನೇ ಜೋರು ಮಳೆಯಾಗಿದ್ದು ಬಹುತೇಕ ಕೆರೆಗಳು ಮೈದುಂಬಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ, ಕೆಲವು ಕೆರೆಗಳು ಕೋಡಿ ಬೀಳುವ ನೀರಿಕ್ಷೆ ಇದ್ದು ಅವಳಿ ಜಲಾಶಯಗಳಾದ ಚಿಕ್ಕಹೊಳೆ ಮತ್ತು ಸುವರ್ಣಾವತಿಗೆ ಜೀವಕಳೆ ಬಂದಿದೆ.
ಹನೂರು ಭಾಗದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಹಳ್ಳಗಳು ತುಂಬಿ ಕೆಲಕಾಲ ಸಂಚಾರವೇ ಸ್ಥಗಿತಗೊಂಡಿತ್ತು, ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ತೆರಳುವ ಮಾರ್ಗದಲ್ಲಿ ಕುಸಿದ ಗುಡ್ಡವನ್ನು ಪೊಲೀಸರು ಹರಸಾಹಸಪಟ್ಟು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
10 ಕೆರೆಗಳು ಭರ್ತಿ: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಒಟ್ಟು 64 ಕೆರೆಗಳಲ್ಲಿ 10 ಕೆರೆಗಳು ಭರ್ತಿಯಾಗಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಭಾಸ್ಕರ್ ತಿಳಿಸಿದರು. 36 ಕೆರೆಗಳು ಖಾಲಿ ಇದ್ದು, 7 ಕೆರೆಗಳು ಶೇ. 50ಕ್ಕಿಂತ ಹೆಚ್ಚು ತುಂಬಿವೆ. ಶೇ.30 ಕ್ಕಿಂತ ಕಡಿಮೆ ತುಂಬಿರುವ ಕೆರೆಗಳ ಸಂಖ್ಯೆ 7 ಇದ್ದು, ಶೇ.30ಕ್ಕಿಂತ ಹೆಚ್ಚು ತುಂಬಿರುವ ಕೆರೆಗಳು 4 ಇವೆ ಎಂದು ಮಾಹಿತಿ ನೀಡಿದ್ದಾರೆ.
ನವಿಲು ಬೆಟ್ಟದ ವಿಡಿಯೋ ವೈರಲ್: ಮಲೆ ಮಹದೇಶ್ವರ ಬೆಟ್ಟ ಶ್ರೇಣಿಯಲ್ಲಿನ ನವಿಲು ಬೆಟ್ಟದಲ್ಲಿ ಧುಮ್ಮಿಕುತ್ತಿದ್ದ ಮಳೆ ನೀರಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ಲಾಗಿದ್ದು ಹಸಿರ ನಡುವೆ ಹಾಲ್ನೊರೆಯ ನೀರನ್ನು ಕಾಣುವುದೇ ದೊಡ್ಡ ಸೊಬಗಾಗಿತ್ತು. ಈ ನವಿಲಿನ ಬೆಟ್ಟದ ನೀರು ಗೋಪಿನಾಥಂಗೆ ಬಂದು ಸೇರಲಿದ್ದು ಈಗಾಗಲೆ ಗೋಪಿನಾಥಂ ಕೆರೆ ಭಾಗಶಃ ತುಂಬಿದೆ.
ಕೊಳ್ಳೇಗಾಲದಲ್ಲೂ ಜೋರು ಮಳೆಯಾಗಿದ್ದರಿಂದ ರಸ್ತೆಗಳೆಲ್ಲಾ ಕೆಸರು ಗದ್ದೆಗಳಾಗಿ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಭ್ರಮ ನಿರಸನ ಉಂಟು ಮಾಡಿತು. ಭಾರೀ ಗಾಳಿ ಮಳೆಗೆ ಎಂಜಿಎಸ್ವಿ ಕಾಲೇಜಿನ ಆವರಣದಲ್ಲಿ ಮರದ ರೆಂಬೆ ಮುರಿದುಬಿದ್ದು ಕ್ಷಣಕಾಲ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು.
3 ಮನೆಗಳು, ಸೇತುವೆ ಕುಸಿತ: ಚಾಮರಾಜನಗರ, ಯಳಂದೂರು ತಾಲೂಕಿನ ಗೌಡಹಳ್ಳಿ ಮತ್ತು ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯಲ್ಲಿ ಭಾರಿ ಮಳೆಗೆ ಮನೆಗಳು ಕುಸಿದು ಬಿದ್ದಿದ್ದು, ಕಬ್ಬಳ್ಳಿಯಲ್ಲಿ ಪುಟ್ಟಮಾದಮ್ಮ ಎಂಬವರಿಗೆ ಮಾತ್ರ ಕಾಲಿಗೆ ಪೆಟ್ಟಾಗಿದೆ. ಉಳಿದ ಎರಡು ಪ್ರಕರಣಗಳಲ್ಲೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಇನ್ನು ಚಾಮರಾಜನಗರ ತಾಲೂಕಿನ ಬೂದಿಪಡಗದ ಸೇತುವೆ ಭಾರೀ ಮಳೆಗೆ 3 ಅಡಿಯಷ್ಟು ಕುಸಿದಿದ್ದು ಜನರು ಆತಂಕಕ್ಕೀಡಾಗಿದ್ದಾರೆ.
ಗಜರಾಜ ಮೂಡಿಸಿದ ತಲ್ಲಣ:ಮಳೆಯಿಂದ ಹೈರಣಾದ ಗುಂಡ್ಲುಪೇಟೆ ಭಾಗದ ಜನರಿಗೆ ಪುಂಡಾನೆಯೊಂದು ತಲ್ಲಣವನ್ನೇ ಉಂಟುಮಾಡಿತು. ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಿಂದ ರಾಜ್ಯಕ್ಕೆ ಬಂದ ಆನೆ ಶಿವಪುರದ ಸಿದ್ದಯ್ಯ ಮತ್ತು ಹಂಗಳದ ರವಿಕುಮಾರ್ ಎಂಬ ಯುವಕನ ಮೇಲೆ ದಾಳಿ ನಡೆಸಿದ್ದು, ಅರಣ್ಯ ಇಲಾಖೆ ಬುಧವಾರ ಬೆಳಗ್ಗೆ ಆನೆ ಸೆರೆಗೆ ಸಿದ್ಧತೆ ಕೈಗೊಂಡಿದ್ದಾರೆ.
ಸದ್ಯ, ಹಂಗಳದ ಕೆರೆ ಬಳಿ ಆನೆ ಠಿಕಾಣಿ ಹೂಡಿದ್ದು ಈ ಹಿಂದೆ 7 ಮಂದಿಯನ್ನು ಬಲಿ ಪಡೆದಿದ್ದರಿಂದ ತಮಿಳುನಾಡು ಅರಣ್ಯ ಇಲಾಖೆ ಆನೆಗೆ ರೇಡಿಯೋ ಕಾಲರ್ ಅನ್ನು ಅಳವಡಿಸಿದ್ದರು. ಬ್ಯಾಟರಿ ಕೈಕೊಟ್ಟಿದ್ದರಿಂದ 15 ದಿನಗಳಿಂದ ಆನೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ಒಟ್ಟಿನಲ್ಲಿ ಇಂದು ದಿನಪೂರ್ತಿ ಮಳೆ ಮತ್ತು ಆನೆಯ ಅಟಾಟೋಪಕ್ಕೆ ಜನರು ಹೈರಾಣಾಗಿದ್ದು ವ್ಯಾಪಾರ ವಹಿವಾಟಿಗೆ ಕತ್ತರಿ ಬೀಳುವ ಜೊತೆಗೆ ಜನಜೀವನವೂ ಅಸ್ತವ್ಯಸ್ತವಾಗಿದೆ.