ಕೊಳ್ಳೇಗಾಲ (ಚಾಮರಾಜನಗರ): ಗ್ರಾಮ ಪಂಚಾಯಿತಿ ಸದಸ್ಯನೋರ್ವ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆ ಎನ್ನಲಾದ ಆರೋಪ ಕೇಳಿ ಬಂದ ಬೆನ್ನಲ್ಲೇ, ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಘಟನೆ ನಡೆದಿದೆ. ತಾಲೂಕಿನ ಹರಳೆ ಗ್ರಾಮ ಪಂಚಾಯತಿ ಸದಸ್ಯರಾದ ಹೊಸ ಹಂಪಾಪುರ ಗ್ರಾಮದ ನಾಗರಾಜು ಅಲಿಯಾಸ್ ನಾಗಟ್ಟಿ ರಾಜೀನಾಮೆ ನೀಡಿದ ಸದಸ್ಯ.
ಜೂನ್ 25 ರಂದು ಗ್ರಾಮ ಪಂಚಾಯತಿಯಲ್ಲಿ ವಿಚಾರವೊಂದರ ಬಗ್ಗೆ ಮಾತನಾಡುವಾಗ ಅಂಬೇಡ್ಕರ್ ಬಗ್ಗೆ ಅವರು ಏಕವಚನದಲ್ಲಿ ನಿಂದಿಸಿದ್ದಾರೆ ಎನ್ನಲಾಗಿದೆ. ಆ ವೇಳೆ ಸನಿಹದಲ್ಲಿದ್ದ ಕೆಲವರು ಈ ಮಾತನ್ನು ಕೇಳಿಕೊಂಡಿದ್ದು, ಹಳೇ ಹಂಪಾಪುರ ಗ್ರಾಮಸ್ಥರಿಗೆ ಈ ವಿಚಾರ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಯುವಕರ ಗುಂಪೊಂದು ನಾಗರಾಜು ಅವರನ್ನು ಪ್ರಶ್ನಿಸಲು ಮುಂದಾಗಿದ್ದು ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಈ ಬಗ್ಗೆ ದಲಿತ ಮುಂಖಡರು ಪಂಚಾಯಿತಿ ಮಾಡಲು ಸೇರಿದ್ದು, ನಾಗರಾಜು ಸಭೆಗೆ ಹಾಜರಾಗಿಲ್ಲ. ಬಳಿಕ ಅದೇ ರೀತಿ ಕರೆಯಲಾಗಿದ್ದ ಮತ್ತೊಂದು ಸಭೆಗೆ ಬಂದ ನಾಗರಾಜು ನಾನೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಅದಕ್ಕೊಪ್ಪದ ದಲಿತ ಮುಖಂಡರು ಅಂಬೇಡ್ಕರ್ ಅವರನ್ನು ನಿಂದಿಸಿರುವುದು ನಮಗೆ ತಿಳಿದಿದೆ. ಆದ್ದರಿಂದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡಬೇಕೆಂದು ಸೂಚಿಸಿದ್ದರು ಎನ್ನಲಾಗಿದೆ.
ಪರಿಣಾಮ ಜೂನ್ 28ರಂದು ನಾಗರಾಜು ತಮ್ಮ ರಾಜೀನಾಮೆ ಪ್ರತಿಯನ್ನು ಉಪವಿಭಾಗಧಿಕಾರಿ, ತಾಲೂಕು ಪಂಚಾಯಿತಿಯ ಇಒ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನೀಡಿದ್ದಾರೆ.
ರಾಜೀನಾಮೆ ಪತ್ರದ ಸಾರಾಂಶ
ನನ್ನ ವೈಯಕ್ತಿಕ ಕಾರ್ಯಗಳ ಮಧ್ಯೆ ಗ್ರಾಮ ಪಂಚಾಯಿತಿ ಸದಸ್ಯನಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅವಿದ್ಯಾವಂತನಾಗಿದ್ದು ಕಾನೂನು ಬಗ್ಗೆ ಅರಿವಿಲ್ಲ. ಕೂಲಿ ಕಾರ್ಮಿಕನಾಗಿದ್ದು ಬೇರೆ ಗ್ರಾಮಗಳಿಗೆ ಕೂಲಿಗೆ ಹೋಗಿ ನನ್ನ ಸಂಸಾರವನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲದ ಕಾರಣ ಹಾಗೂ ಸಾರ್ವಜನಿಕರ ಕುಂದುಕೊರತೆಯನ್ನು ಬಗೆಹರಿಸಲು ಆಗದೆ ಸ್ವ-ಇಚ್ಚೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆಯಲಾಗಿದೆ.