ಚಾಮರಾಜನಗರ: ತಿಂಗಳಿನಿಂದ 20ಕ್ಕೂ ಹೆಚ್ಚು ಜಾನುವಾರುಗಳ ಮೇಲೆ ದಾಳಿ ಮಾಡಿರುವ ಹುಲಿ ಸೆರೆಗೆ ಪತ್ರ ಬರೆಯಲಾಗುವುದು. ಸಾಧ್ಯವಾದರೆ, ಸೋಮವಾರದಿಂದಲೇ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅರಣ್ಯ ಸಚಿವ ಆನಂದಸಿಂಗ್ ಹೇಳಿದ್ದಾರೆ.
ಬಂಡೀಪುರದ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದಲ್ಲಿ ಹುಲಿಯೊಂದು ಕಳೆದ ಒಂದು ತಿಂಗಳಿನಿಂದ ಉಪಟಳ ನೀಡುತ್ತಿರುವ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಭೇಟಿ ನೀಡಿದ ಆನಂದಸಿಂಗ್, ರೈತರ ಸಮಸ್ಯೆ ಆಲಿಸಿದರು. ಬಳಿಕ ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಿಯನ್ನು ಕೂಂಬಿಂಗ್ ಕಾರ್ಯಾಚರಣೆ ಮಾಡಿ ಕಾಡಿಗೆ ಓಡಿಸುವ ಬದಲು ಸೆರೆಗೆ ಇಲಾಖೆ ಮುಂದಾಗಲಿದೆ. ಅದು ತನ್ನ ಸರಹದ್ದನ್ನು ಬಿಟ್ಟು ಬಂದಿರುವುದರಿಂದ ಈ ಸಂಘರ್ಷ ಆಗುತ್ತಿದೆ.
ಗುಂಡ್ಲುಪೇಟೆ ತಾಲೂಕಿನ ಬಹುತೇಕ ಕಡೆ ಆನೆಯಿಂದ ಫಸಲು ನಾಶವಾಗುತ್ತಿರುವುದರಿಂದ ರೈಲ್ವೆ ಕಂಬಿಗಳನ್ನ ಅಳವಡಿಸಲಾಗುವುದು. ಪ್ರಾಣಿಗಳ ದಾಳಿಯಿಂದ ಬೆಳೆನಾಶವಾದರೆ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.