ಚಾಮರಾಜನಗರ: ಹೊಸ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ವಿರೋಧಿಸಿ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಧರಣಿ ಬೆಂಬಲಿಸಿ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಟೈರ್ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆದರು.
ನಗರದ ರೇಷ್ಮೆ ಮಾರುಕಟ್ಟೆ ಎದುರು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ - 209ರಲ್ಲಿ ಜಮಾಯಿಸಿದ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಮಳೆಯ ನಡುವೆಯೂ ಹೆದ್ದಾರಿ ಸಂಚಾರ ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಈ ವೇಳೆ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ರೈತರ ಹಕ್ಕು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳು ರೈತರ ಮರಣ ಶಾಸನವಾಗಿದೆ. ಈ ಕೃಷಿ ಕಾನೂನುಗಳಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ. ಕೇಂದ್ರ ಸರ್ಕಾರ ಕೂಡಲೇ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.