ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ, ಸಭೆ ನಡೆಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆಂದು ರೈತ ಸಂಘದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಇಂದು 12 ಕ್ಕೆ ಕರೆದಿದ್ದ ಸಭೆ 1.30 ಆದರೂ ಆರಂಭವಾಗದ ಹಿನ್ನೆಲೆಯಲ್ಲಿ ಸಭೆ ಬಹಿಷ್ಕರಿಸಿ ಹೊರನಡೆದ ರೈತರು, ಜಿಲ್ಲಾಡಳಿತ ಭವನದ ಎದುರು ಕುಳಿತು ಸಚಿವ ಸೋಮಣ್ಣ ವಿರುದ್ಧ ಘೋಷಣೆಗಳ ಕೂಗಿ ಆಕ್ರೋಶ ಹೊರಹಾಕಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭ್ರಷ್ಟರು, ಸುಳ್ಳುಗಾರರು, ಅಧಿಕಾರಿಗಳ ಮೇಲಷ್ಟೇ ಅವರು ದರ್ಪ ತೋರಲಿದ್ದು, ರೈತರ ಸಮಸ್ಯೆ, ಜನರ ಸಮಸ್ಯೆ ಕೇಳಲ್ಲ ಎಂದು ಕಿಡಿಕಾರಿದರು.
ಸಿಎಂ ಸೂಚನೆ ಮೇರೆಗೆ ನಮ್ಮ ಸಭೆ ಕರೆದಿದ್ದರು. ಅದೂ ಕೂಡ ಅರ್ಧ ಗಂಟೆ ಸಭೆಗೆ ಒಂದೂವರೆ ತಾಸಾದರೂ ಬಂದಿಲ್ಲ, ನಾವು ಇನ್ಮುಂದೆ ಸೋಮಣ್ಣ ಸಭೆಗೆ ಭಾಗಿಯಾಗಲ್ಲ, ಅವರು ಹೋದ ಕಡೆಯಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಮೊಟ್ಟೆ, ಟೊಮೆಟೊ ಎಸೆಯುತ್ತೇವೆ. ಇದು ಭಾನುವಾರದಿಂದಲೇ ಆರಂಭವಾಗಲಿದೆ ಎಂದು ಎಚ್ಚರಿಸಿದರು. ಇನ್ನು, ಇದೇ ವೇಳೆ ಕಳೆದ ಬಾರಿ ರೈತರ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯಗಳನ್ನು ಸುಟ್ಟು ನಮಗೇ ಸೋಮಣ್ಣ ಬೇಡ, ಸಿಎಂ ಬೊಮ್ಮಾಯಿ ಅವರೇ ಸಭೆ ನಡೆಸಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಆರ್ಎಸ್ಎಸ್ ರಾಷ್ಟ್ರೀಯ ಸುಳ್ಳುಗಾರರ ಸಂಘ.. ಪ್ರೊ ಭಗವಾನ್