ಚಾಮರಾಜನಗರ: ಇಷ್ಟು ವರ್ಷ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿತ್ತು. ಆದರೆ, ಕೋವಿಡ್ ಪರಿಣಾಮದಿಂದ ಈ ಬಾರಿ ಖಾಸಗಿ ಶಾಲೆಗಳಲ್ಲೇ ದಾಖಲಾತಿ ಕುಸಿದಿದೆ.
ಹೌದು, ಈ ಕುರಿತು ಡಿಡಿಪಿಐ ಜವರೇಗೌಡ ಈಟಿವಿ ಭಾರತಕ್ಕೆ ಮಾಹಿತಿ ನೀಡಿ, ಈ ವರ್ಷ ಖಾಸಗಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿವರೆಗಿನ 2,582 ಮಕ್ಕಳು 2020-21 ಸಾಲಿಗೆ ದಾಖಲಾತಿ ಪಡೆಯದೇ ಹೊರಗುಳಿದಿದ್ದು, ಅನುದಾನಿತ ಶಾಲೆಗಳಿಗೆ 1,164 ಮಕ್ಕಳು ದಾಖಲಾಗಿಲ್ಲ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕೇವಲ 129 ಮಕ್ಕಳಷ್ಟೇ ಈ ಸಾಲಿನ ದಾಖಲಾತಿ ಪಡೆದಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2,101 ಬಾಲಕಿಯರು, 2,504 ಬಾಲಕರು ಸೇರಿದಂತೆ ಒಟ್ಟು 4,605 ಮಕ್ಕಳು ಈ ಬಾರಿ ಶಾಲೆಯಿಂದ ಹೊರಗುಳಿದಿದ್ದಾರೆ. ಚಾಮರಾಜನಗರ ತಾಲೂಕು ಒಂದರಲ್ಲೇ 2,125 ಮಕ್ಕಳು ದಾಖಲಾತಿ ಪಡೆದಿಲ್ಲ ಇವರಲ್ಲಿ ಖಾಸಗಿ ಶಾಲೆಯ 1,400 ಮಂದಿ ಇದ್ದಾರೆ. ಉಳಿದಂತೆ, ಜವಾಹರ್ ನವೋದಯದ 38, ಕೇಂದ್ರೀಯ ವಿದ್ಯಾಲಯದ 48 ಮಕ್ಕಳು ದಾಖಲಾತಿ ಪಡೆದಿಲ್ಲ ಎಂದರು.
ಸರ್ಕಾರಿ ಶಾಲೆಗೆ 769 ಮಕ್ಕಳು:
ಸರ್ಕಾರದ ಉಚಿತ ಶಿಕ್ಷಣ ನೀತಿ, ಮನೆಬಾಗಿಲಿಗೆ ತೆರಳಿ ಪಾಠ ಮಾಡುವ ಯೋಜನೆಯಾದ ವಿದ್ಯಾಗಮ, ಊರಿನಲ್ಲೇ ಶಾಲೆ ಎಂಬಿತ್ಯಾದಿ ಅಂಶಗಳಿಂದ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಈ ಬಾರಿ 769 ಮಕ್ಕಳು ದಾಖಲಾಗಿರುವುದು ವಿಶೇಷ.