ಚಾಮರಾಜನಗರ: 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ವೇಳೆ ಹಾರ್ಮೋನಿಯಂ ನೀಡುವಂತೆ ಅಂಧ ಕಲಾವಿದರೊಬ್ಬರು ಮನವಿ ಮಾಡಿದ್ದು, ನಿನ್ನೆ ಅವರಿಗೆ ಹಾರ್ಮೋನಿಯಂ ವಿತರಿಸಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆಯಲ್ಲಿ ಕಳೆದ ಮಾ. 20 ರ ಶನಿವಾರ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ವೇಳೆ ಅಂಧ ಕಲಾವಿದ ಬೊಮ್ಮಲಾಪುರದ ಬೆಟ್ಟನಾಯಕ ಎಂಬವರು ಭಜನೆ, ಸಂಗೀತ, ಗಾಯನದಂತಹ ಕಾರ್ಯಕ್ರಮಗಳಲ್ಲಿ ನನ್ನ ಸಂಗಡಿಗರೊಂದಿಗೆ ಪಾಲ್ಗೊಳ್ಳುತ್ತಿದ್ದೇನೆ. ನನಗೆ ಹಾರ್ಮೋನಿಯಂ ನೀಡಿದ್ದಲ್ಲಿ ಅನುಕೂಲವಾಗುತ್ತದೆ ಎಂದು ಡಿಸಿ ಬಳಿ ಅಹವಾಲು ಸಲ್ಲಿಸಿದ್ದರು. ಆ ವೇಳೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಾರ್ಮೋನಿಯಂ ನೀಡುವಂತೆ ಸೂಚಿಸಿದ್ದರು.
ಮನವಿ ಮಾಡಿದ ಮೂರೇ ದಿನಗಳಲ್ಲಿ ಕಲಾವಿದನ ಕೋರಿಕೆಯಂತೆ ಹಾರ್ಮೋನಿಯಂ ಅನ್ನು ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ನಿನ್ನೆ ವಿತರಣೆ ಮಾಡಿದರು.
ಇನ್ನು ಹಾರ್ಮೋನಿಯಂ ಪಡೆದ ಕಲಾವಿದ ಬೆಟ್ಟನಾಯಕ, ಮೂರೇ ದಿನಗಳಲ್ಲಿ ತಮ್ಮ ಕೋರಿಕೆ ಪೂರೈಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಡಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.