ಚಾಮರಾಜನಗರ: ರಾಷ್ಟ್ರಪತಿಗಳಿಂದ ಇಂದು ಉದ್ಘಾಟನೆಗೊಳ್ಳುತ್ತಿರುವ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೊರವಲಯದ ರಸ್ತೆ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿರುವುದು ಜಿಲ್ಲಾಕೇಂದ್ರಕ್ಕೆ ಬಂದರೂ ಬಾರದಂತಾಗಿದೆ.
ನಗರ ಹೊರವಲಯದ ರಸ್ತೆ ಮೂಲಕ ಎಡಬೆಟ್ಟದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಆಗಮಿಸಿದ್ದು, ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬಾರದೆಯೇ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮೌಢ್ಯಕ್ಕೆ ಒಳಗಾದರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಚಾಮರಾಜನಗರ ಹೊರವರ್ತುಲ ರಸ್ತೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಸಿಎಂ ಅವರನ್ನು ಬರಮಾಡಿಕೊಂಡರು. ನೂಕು ನುಗ್ಗಲು ಹೆಚ್ಚಾದ್ದರಿಂದ ಕಾರಿಂದ ಇಳಿಯದೇ ಮೆಡಿಕಲ್ ಆಸ್ಪತ್ರೆಗೆ ತೆರಳಿದರು. ಸಿಎಂ ಅವರು ರಾಷ್ಟ್ರಪತಿ ಕಾರ್ಯಕ್ರಮಕ್ಕಷ್ಟೇ ಬಂದಿದ್ದು, ಇಲ್ಲಿನ ಅಧಿಕಾರಿಗಳೊಟ್ಟಿಗೆ ಸಭೆ, ಸಾರ್ವಜನಿಕರ ಅಹವಾಲು ಯಾವುದನ್ನೂ ಸ್ವೀಕರಿಸುವುದಿಲ್ಲ. ಹೊರವರ್ತುಲ ರಸ್ತೆಯಲ್ಲೇ ಬಂದು ಹೊರವರ್ತುಲ ರಸ್ತೆಯಲ್ಲೇ ತೆರಳಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.