ಚಾಮರಾಜನಗರ: ಚಾಮರಾಜನಗರ ನಗರಸಭೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದು ಪೌರಕಾರ್ಮಿಕರ ದಿನ ಆಚರಿಸಲಾಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟಿವಿಯಲ್ಲಿ ಕಾಣಿಸಿಕೊಳ್ಳಲು ಪೌರ ಕಾರ್ಮಿಕರ ಪಾದ ಪೂಜೆ ಮಾಡುವುದು ಮಾನವೀಯತೆ ಅಲ್ಲ. ಆ ಒಂದು ದಿನ ಪೌರಕಾರ್ಮಿಕರ ಪಾದ ಪೂಜೆ ಮಾಡಿ ಆ ಬಳಿಕ ಯಾರೂ ಮುಟ್ಟಿಸಿಕೊಳ್ಳಲ್ಲ. ಜಾತಿ ತಾರತಮ್ಯ ಇನ್ನೂ ಪೂರ್ಣವಾಗಿ ದೂರವಾಗಿಲ್ಲ ಎಂದರು.
ಪೌರಕಾರ್ಮಿಕರು ಕುಡಿತದ ಗೀಳಿಗೆ ಬಲಿಯಾಗಬೇಡಿ. ಕುಡಿಯುವುದರಿಂದ ಜನ ನಿಮ್ಮನ್ನು ಗೌರವಯುತವಾಗಿ ನೋಡುತ್ತಿಲ್ಲ. ಕುಡಿತ ಬಿಟ್ಟರೆ ನಿಮ್ಮಷ್ಟು ಉತ್ತಮ ಜೀವನ ಮಾಡುವರು ಯಾರೂ ಇಲ್ಲ ಎಂದು ಹೇಳಿದರು.
ಆಯುಕ್ತರ ವಿರುದ್ಧ ಧಿಕ್ಕಾರ ಘೋಷಣೆ: ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಉಡುಗೊರೆ ಹಂಚುವ ವೇಳೆ ಚಾಮರಾಜನಗರ ನಿವಾಸಿ ಗಿರೀಶ್ ಎಂಬವರು ನಗರಸಭೆ ಪೌರಾಯುಕ್ತ ರಾಮದಾಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅನಿರೀಕ್ಷಿತ ಘಟನೆಯಿಂದ ಶಾಸಕರು, ಅಧಿಕಾರಿಗಳು ಕೆಲಕಾಲ ಗಲಿಬಿಲಿಯಾದರು. ನಗರಸಭೆಯಲ್ಲಿ ಯಾವುದೇ ಕೆಲಸ ಆಗಬೇಕು ಅಂದರೆ ಲಂಚ ಕೊಡಲೇಬೇಕು ಎಂದು ಏಕಾಏಕಿ ವೇದಿಕೆಯೇರಿದ ಗಿರೀಶ್ ಆಕ್ರೋಶ ಹೊರಹಾಕಿದರು. ಕಳೆದ 6 ತಿಂಗಳಿನಿಂದ ಇ-ಸ್ವತ್ತು ಮಾಡಿಕೊಡಲು ನಿತ್ಯ ಅಲೆದಾಡಿಸುತ್ತಿದ್ದೇನೆ ಎಂದರು. ಬಳಿಕ ಅವರನ್ನು ಸಮಾಧಾನಪಡಿಸಿದ್ದು, ಪರಿಸ್ಥಿತಿ ತಿಳಿಯಾಯಿತು.
ಕಿವಿಗೆ ಚೆಂಡು ಹೂ ಇಟ್ಟುಕೊಂಡು ರಸ್ತೆ ತಡೆ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದಕ್ಕೆ ಚಾಮರಾಜನಗರದಲ್ಲಿ ಕಳೆದ 28 ದಿನಗಳಿಂದಲೂ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ. ಇಂದು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ನಗರದ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸ ಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಿವಿಗೆ ಚೆಂಡು ಹೂ ಇಟ್ಟುಕೊಂಡು ರಸ್ತೆ ತಡೆ ನಡೆಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ನ ಅವೈಜ್ಞಾನಿಕ ತೀರ್ಪು ಕನ್ನಡಿಗರ ಕಿವಿಗೆ ಹೂ ಮುಡಿಸಿದೆ. ಕರ್ನಾಟಕ ಸರ್ಕಾರ ನಿರಂತರವಾಗಿ ನೀರು ಹರಿಸುವ ಮೂಲಕ ರೈತರು, ಜನರ ಕಿವಿಗೆ ಹೂ ಮುಡಿಸಿದೆ ಎಂದು ಚಾ.ರಂ.ಶ್ರೀನಿವಾಸ ಗೌಡ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ತಮಿಳುನಾಡಿನ ಸಿಎಂ ಸ್ಟಾಲಿನ್ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿ ಆಕ್ರೋಶ ಹೊರಹಾಕಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.