ಚಾಮರಾಜನಗರ: ಚಿಕನ್ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕುಮಾರಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜು ಅವರು ಬುಧವಾರ ಆದೇಶ ಹೊರಡಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಅಮಾನತು ಮಾಡಿಸಿ, ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಅವರ ಸ್ಥಾನಕ್ಕೆ ಪ್ರಭಾರ ಪ್ರಾಂಶುಪಾಲರಾಗಿ ಅದೇ ಶಾಲೆಯ ಕಂಪ್ಯೂಟರ್ ಶಿಕ್ಷಕ ಎಂ. ಕುಮಾರಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಅಮಾನತುಗೊಂಡ ಪ್ರಾಂಶುಪಾಲರೇ ಪ್ರಭಾರ ನಿಲಯಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಡುಗೆ ಸಿಬ್ಬಂದಿಯಲ್ಲಿ ಸಮನ್ವಯತೆ ಇಲ್ಲದಿರುವುದು, ವಸತಿ ಶಾಲೆಯಲ್ಲಿ ಶುಚಿತ್ವ ಇಲ್ಲದಿರುವು ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಕಳೆದ ಭಾನುವಾರ ರಾತ್ರಿ ಚಿಕನ್ ಆಹಾರ ಸೇವಿಸಿ 28 ಮಕ್ಕಳಿಗೆ ವಾಂತಿ-ಬೇಧಿ ಕಾಣಿಸಿಕೊಂಡು 16 ಮಂದಿ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಜಿಂಕೆ ಮಾಂಸ ಸಾಗಿಸುತ್ತಿದ್ದವರ ಬಂಧನ: ಅರಣ್ಯದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಸಾಗಾಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಇಲಾಖೆ ಬಂಧಿಸಿರುವ ಘಟನೆ ಹನೂರು ತಾಲ್ಲೂಕಿನ ರಾಮಾಪುರದಲ್ಲಿ ನಡೆದಿದೆ. ರಾಮಾಪುರ ಗ್ರಾಮದ ಕೃಷ್ಣಮೂರ್ತಿ ಅಲಿಯಾಸ್ ಮುತ್ತು ಹಾಗೂ ಬಾಲಕ ಅಜಿತ್ ಕುಮಾರ್ ಬಂಧಿತರು.
ಕೌದಳ್ಳಿ ವಲಯ ಅರಣ್ಯಾಧಿಕಾರಿ ಸುಂದರ್, ರಾಮಾಪುರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್, ಗಸ್ತು ಅರಣ್ಯ ಪಾಲಕರಾದ ಬಿಲ್ಲಪ್ಪ, ಗಣೇಶ್‌ಪ್ರಸಾದ್, ಬೀರಪ್ಪ ಹಳ್ಳಿ ಹಾಗೂ ಕಳ್ಳಬೇಟೆ ಶಿಬಿರದ ಸಿಬ್ಬಂದಿ ತಂಡ ರಾಮಾಪುರ ವನ್ಯಜೀವಿ ವಲಯ, ಕೌದಳ್ಳಿ ವಲಯದ ರಾಮಾಪುರ ಶಾಖೆಯ ಮುತ್ತಶೆಟ್ಟಿಯೂರು ಗಸ್ತಿನ ವ್ಯಾಪ್ತಿಗೆ ಬರುವ ರಾಮಾಪುರ ಗ್ರಾಮದ ಸರ್ವೆ ನಂಬರ್ 105/1 ಮತ್ತು 105/2ರ ಜಮೀನಿನಲ್ಲಿ ಕಾಡು ಪ್ರಾಣಿಯಾದ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಸಾಗಾಣೆಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.
ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದು ಜಿಂಕೆಯ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಂಕೆ ಮಾಂಸದ ಸಾಗಣೆ ಮಾಡುತ್ತಿದ್ದ ಮತ್ತೊರ್ವ ಪ್ರಮುಖ ಆರೋಪಿ ಗೆಜ್ಜಲನಾತ್ತ ಗ್ರಾಮದ ಆರ್ಮುಗಂ ಪರಾರಿಯಾಗಿದ್ದು, ಆತನಿಗೆ ಬಲೆ ಬೀಸಲಾಗಿದೆ.
ಬಂದೂಕು ಇಟ್ಟುಕೊಂಡಿದ್ದ ಇಬ್ಬರ ಬಂಧನ: ಪರವಾನಗಿ ಇಲ್ಲದೇ ಬಂದೂಕನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆರ್.ಎಸ್. ದೊಡ್ಡಿ ಗ್ರಾಮದ ಇಬ್ಬರನ್ನು ಬಂಧಿಸಲಾಗಿದೆ. ಆರ್.ಎಸ್. ದೊಡ್ಡಿಯ ಸಿದ್ದಶೆಟ್ಟಿ ಹಾಗೂ ಬಸವರಾಜು ಬಂಧಿತ ಆರೋಪಿಗಳು. ಜಮೀನಿನಲ್ಲಿ ನಾಡ ಬಂದೂಕನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹನೂರು ಪೊಲೀಸರು ದಾಳಿ ನಡೆಸಿ, ಒಂದು ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Delhi Crime: ಬಾಲಕಿಯನ್ನು ಮನೆಗೆಲಸಕ್ಕಿರಿಸಿ ಚಿತ್ರಹಿಂಸೆ ನೀಡಿದ ದಂಪತಿಗೆ ಸಾರ್ವಜನಿಕರಿಂದ ಥಳಿತ