ಚಾಮರಾಜನಗರ: ಹಕ್ಕಿಜ್ವರ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಚಾಮರಾಜನಗರ ಜಿಲ್ಲಾದ್ಯಂತ ನಾಳೆಯಿಂದ ಕೋಳಿ ಹಾಗೂ ಕೋಳಿ ಉತ್ಪನ್ನ ಮಾರಾಟ ನಿಷೇಧಿಸಲಾಗಿದೆ.
ನಾಳೆಯಿಂದ ಚಾಮರಾಜನಗರದಲ್ಲಿ ಕೋಳಿ ಉತ್ಪನ್ನ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಮಾತನಾಡಿ, ಕಟ್ಟುನಿಟ್ಟಾಗಿ ಕುಕ್ಕುಟ ಉತ್ಪನ್ನಗಳನ್ನು ನಾಳೆಯಿಂದ ಮುಂದಿನ ಆದೇಶದವರೆಗೆ ಮಾರಾಟ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಹೊರ ಜಿಲ್ಲೆಯಿಂದ ಆಮದಾಗುವ ಕೋಳಿಗಳನ್ನು ತಡೆಯಲು ಬೇಗೂರು, ಹೆಗ್ಗವಾಡಿ, ಸತ್ತೇಗಾಲ, ನರಸೀಪುರ ಸಮೀಪ ಮೂಗೂರಿನಲ್ಲಿ ನಾಲ್ಕು ವಿಶೇಷ ಚೆಕ್ ಪೋಸ್ಟ್ ತೆರೆಯಲಾಗಿದೆ ಎಂದು ತಿಳಿಸಿದರು. ಇನ್ನು ಕೋವಿಡ್-19 ಬಗ್ಗೆ ಮಾತನಾಡಿ, 16 ಮಂದಿ ವಿದೇಶದಿಂದ ಬಂದಿದ್ದು, 12 ಮಂದಿಯನ್ನು ಅವರವರ ಮನೆಯಲ್ಲಿ ನಿಗಾ ಇಡಲಾಗಿದೆ. ಹಾಗೆಯೇ ಜಪಾನ್ನಿಂದ ಬಂದಿದ್ದ ಟೆಕ್ಕಿ ಹಾಗೂ ಮೆಕ್ಕಾಗೆ ತೆರಳಿದ್ದ ಯಳಂದೂರಿನ ಯುವಕನ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಇನ್ನು ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ 100 ಹಾಸಿಗೆಗಳ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ 59 ನಿಗಾ ಘಟಕ ತೆರೆಯಲಾಗಿದೆ. ಜಾತ್ರೆ, ಉತ್ಸವ ರದ್ದಾಗಿದ್ದು, ಮಹಾದೇಶ್ವರ ಬೆಟ್ಟದಲ್ಲಿ ಯಾವುದೇ ರೀತಿಯ ಯುಗಾದಿ ರಥೋತ್ಸವ, ಜಾತ್ರೆ ನಡೆಯುವುದಿಲ್ಲ. ಈಗಾಗಲೇ ತಮಿಳುನಾಡಿನ ಈರೋಡ್, ಕೊಯಮತ್ತೂರು, ಸೇಲಂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅಲ್ಲಿನ ಜನರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದರು.ಅನಗತ್ಯವಾಗಿ ಕಚೇರಿಗೆ ಬರಬೇಡಿ: ಕೆಲಸ ಇದ್ದವರು ಮಾತ್ರ ಸರ್ಕಾರಿ ಕಚೇರಿಗಳಿಗೆ ಬನ್ನಿ. ಅನಗತ್ಯವಾಗಿ ಸರ್ಕಾರಿ ಕಚೇರಿಗೆ ಬರಬೇಡಿ. ಜಿಲ್ಲಾಡಳಿತ ಭವನ ಮತ್ತು ಸರ್ಕಾರಿ ಕಚೇರಿಗಳಿಗೆ ಬರುವ ಮುನ್ನ ಕೈಗಳನ್ನು ತೊಳೆದುಕೊಂಡು ಬನ್ನಿ. ಆಗಾಗ್ಗೆ ಕೈಯನ್ನು ಸ್ವಚ್ಛ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಈಗಾಗಲೇ 3 ಕಂಟ್ರೋಲ್ ರೂಂ ತೆರೆಯಲಾಗಿದ್ದು, ಸಾರ್ವಜನಿಕರು ವಿದೇಶದಿಂದ ಬಂದವರ ಬಗ್ಗೆ ಮಾಹಿತಿ ಕೊಡಬೇಕು. ಪ್ರತಿ ತಾಲೂಕು ಕೇಂದ್ರದಲ್ಲಿ 24X7 ಔಷಧಾಲಯಗಳನ್ನು ಬುಧವಾರದಿಂದಲೇ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.