ಚಾಮರಾಜನಗರ: ಕೊಳಕ್ಕೆ ಹಾರಿ ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಮಹಿಳೆಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮದ ದೊಡ್ಡಮ್ಮ(60) ಮೃತ ದುರ್ದೈವಿ.
ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಗುರುವಾರ ರಾತ್ರಿ ಮಹಿಳೆ ಕೊಳಕ್ಕೆ ಹಾರಿದ್ದಳು. ಈ ವೇಳೆ ಪೊಲೀಸರು ರಕ್ಷಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಅದಾದ ಬಳಿಕ, ಅಲ್ಲಿಂದ ಹೇಗೋ ಪುನಃ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ, ಮಲೆಮಹದೇಶ್ವರ ಪೊಲೀಸ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನು, ಇದೇ ಪಟ್ಟಣದಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ವಾಹನದ ಕ್ಲೀನರ್ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದ ಹುಲಸುಗುಡ್ಡೆ ಸಮೀಪ ಜರುಗಿದೆ. ಧಾರವಾಡದ ಸೆಳವಾಡಿ ಗ್ರಾಮದ ಮೂಲದ ಶ್ರೀಶೈಲ್ (26) ಮೃತ ದುರ್ದೈವಿ. ಹನೂರು ಪಟ್ಟಣದ ಜಡೇಸ್ವಾಮಿ ಎಂಬವರಿಗೆ ಸೇರಿದ ಲಾರಿ ಮಂಡ್ಯದ ಸಕ್ಕರೆ ಕಾರ್ಖಾನೆಯಿಂದ ಸಕ್ಕರೆ ತುಂಬಿಕೊಂಡು ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.
ಈ ವೇಳೆ, ಕೇಶಿಫ್ ರಸ್ತೆ ಕಾಮಗಾರಿಗೆ ಬಳಸುತ್ತಿದ್ದ ಟಿಪ್ಪರ್ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಟಿಪ್ಪರ್ ಹಾಗೂ ಲಾರಿ ಜಖಂಗೊಂಡಿದ್ದು ಟಿಪ್ಪರ್ ವಾಹನದ ಎಡಬದಿಯಲ್ಲಿ ಕುಳಿತಿದ್ದ ಕ್ಲೀನರ್ ಎರಡು ವಾಹನದ ಮಧ್ಯೆ ಸಿಲುಕಿಕೊಂಡು ಅಸುನೀಗಿದ್ದಾನೆ.
ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು