ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 12 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.
90 ಸಕ್ರಿಯ ಪ್ರಕಣರಗಳಿದ್ದು, ಇನ್ನು 1,236 ಮಂದಿಯ ಗಂಟಲು ದ್ರವ ಮಾದರಿಯ ವರದಿ ಬರಬೇಕಿದೆ. ಇನ್ನು ಜಿಲ್ಲೆಯಲ್ಲಿ 20 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.
ಇಂದಿನ 12 ಪ್ರಕರಣಗಳಲ್ಲಿ ಗುಂಡ್ಲುಪೇಟೆ 9 , ಚಾಮರಾಜನಗರ 1 ಹಾಗೂ ಕೊಳ್ಳೇಗಾಲ ಭಾಗಕ್ಕೆ ಸೇರಿದ ಇಬ್ಬರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ 13 ವರ್ಷ ಹಾಗೂ 6 ವರ್ಷದ ಎರಡು ಮಕ್ಕಳು ಸೇರಿ ಒಟ್ಟು 7 ಮಕ್ಕಳಿಗೆ ಸೋಂಕು ವಕ್ಕರಿಸಿದೆ.
ಈ ಕುರಿತು 'ಈಟಿವಿ ಭಾರತ'ದ ಜೊತೆ ದೂರವಾಣಿ ಸಂಪರ್ಕದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, 'ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ತಿಳಿಸಿದರು.
ಯಾವುದೇ ರೋಗ ಲಕ್ಷಣಗಳಿಲ್ಲದ 62 ಮಂದಿ ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರಿನಲ್ಲಿದ್ದು, ಅವರಲ್ಲಿ 20 ಮಂದಿ ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸಂತೇಮರಹಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಕೆಲವೇ ದಿನಗಳಲ್ಲಿ ಕೋವಿಡ್ ಆಸ್ಪತ್ರೆಯನ್ನಾಗಿಸುವ ಕಾರ್ಯ ನಡೆಯುತ್ತಿದೆ ಎಂದರು.