ಆನೇಕಲ್: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಆನೇಕಲ್ ನಾರಾಯಣಸ್ವಾಮಿಗೆ ಅವರ ಹುಟ್ಟೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು.
ಮಾಜಿ ಸಚಿವ ಹಾಗೂ ನೂತನ ಸಂಸದ ಎ.ನಾರಾಯಣಸ್ವಾಮಿಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೆಬ್ಬಗೋಡಿ, ಚಂದಾಪುರದ ಮೂಲಕ ಆನೇಕಲ್ ಪಟ್ಟಣಕ್ಕೆ ಕರೆದುಕೊಂಡು ಬಂದು ಸ್ವಾಗತಿಸಿದರು. ಆನೇಕಲ್ ಭಾಗದ ಮುಖ್ಯ ರಸ್ತೆಯುದ್ದಕ್ಕೂ ಜನರತ್ತ ಕೈ ಬೀಸಿ ನಮಸ್ಕರಿಸಿದ ನಾರಾಯಣಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಆ ನಂತರ ಮುಖಂಡರ ಮನೆ-ಮನೆಗೆ ಭೇಟಿ ನೀಡಿದರು. ಪಟ್ಟಣದ ದೇವರಕೊಂಡಪ್ಪ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿ ನಮಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗೆದ್ದ ಭರಾಟೆ ಒಂದೆಡೆ ಜೋರಾದರೆ, ಇನ್ನೊಂದೆಡೆ ಆನೇಕಲ್ ಪುರಸಭೆ ಚುನಾವಣೆ ಜೋರಾಗಿ ಸದ್ದು ಮಾಡುತ್ತಿದೆ. ಎ.ನಾರಾಯಣಸ್ವಾಮಿಯ ಬೆಂಬಲಿಗರೇ ಪುರಸಭೆಗೆ ಉಮೇದುವಾರರಾಗಿದ್ದು, ಸಂಸದರ ಗೆಲುವು ಬಿಜೆಪಿ ಪಾಳಯದ ಅಭ್ಯರ್ಥಿಗಳಿಗೆ ನೆರವಾಗುವುದರಿಂದ ವಾರ್ಡ್ಗಳಿಗೂ ಮೆರವಣಿಗೆ ಕಾಲಿಟ್ಟಿತು.