ಬೀದರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡನೇ ಜಲಿಯಾನ್ ವಾಲಾಬಾಗ್ ಎಂದೇ ಕರೆಯಲ್ಪಡುವ ಬೀದರ್ನ ಹಲಸೂರು ತಾಲ್ಲೂಕಿನ ಗೋರ್ಟಾ ಗ್ರಾಮಕ್ಕೆ ಆಗಮಿಸಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿ ಅನಾವರಣಗೊಳಿಸಿದ್ದಾರೆ. ಇದೇ ವೇಳೆ ಹುತಾತ್ಮರ ಸ್ಮಾರಕ ಹಾಗೂ 103 ಅಡಿ ಎತ್ತರದ ರಾಷ್ಟ್ರ ಧ್ವಜ ಸ್ತಂಭ ಲೋಕಾರ್ಪಣೆಗೊಳಿಸಿದ್ದಾರೆ.
ವಿಶೇಷ ಹೆಲಿಕಾಪ್ಟರ್ ಮೂಲಕ ಬೀದರ್ ವಾಯುನೆಲೆಯಿಂದ ಬೀದರ್ನ ಹಲಸೂರು ತಾಲ್ಲೂಕಿನ ಗೋರ್ಟಾ ಗ್ರಾಮಕ್ಕೆ ಅವರು ಆಗಮಿಸಿದರು. ಈ ವೇಳೆ ಅವರಿಗೆ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಪ್ರಭು ಚೌಹಾಣ್, ಶಾಸಕ ಶರಣು ಸಲಗಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿ ಎಲ್ ಸಂತೋಷ್ ಸಾಥ್ ನೀಡಿದ್ದಾರೆ.
ಬಸವಕಲ್ಯಾಣದ ಗೋರ್ಟಾದಲ್ಲಿ ಜಗಜ್ಯೋತಿ ಬಸವಣ್ಣನ ಸ್ಮರಿಸಿ ಭಾಷಣ ಆರಂಭಿಸಿದ ಅಮಿತ್ ಶಾ, ಬಸವಣ್ಣ ಜಗತ್ತಿಗೆ ಮೊದಲ ಅನುಭವ ಮಂಟಪ ಕೊಟ್ಟ ಮಹಾನ್ ವ್ಯಕ್ತಿ. ಗುರುನಾನಕ್, ನರಸಿಂಹ ಝರನಾಕ್ಕೆ ನಮಸ್ಕರಿಸಿದ ಅಮಿತ್ ಶಾ, ಇವತ್ತಿನ ದಿನ ನನ್ನ ಜೀವನದಲ್ಲಿ ಬಹಳ ಪ್ರಮುಖವಾದ ದಿನ. ಗೋರ್ಟಾ ಹತ್ಯಾಕಾಂಡದಲ್ಲಿ 200 ಜನರನ್ನ ಹತ್ಯೆ ಮಾಡಿದ್ದರು. ಹೀಗಾಗಿ ಗೋರ್ಟಾದಲ್ಲಿ ಹುತಾತ್ಮರಾದವರ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಜೊತೆಗೆ ಈ ಭಾಗಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸರ್ಧಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದರು.
ಬಿಜೆಪಿಗೆ ಪೂರ್ಣ ಬಹುಮತ ನೀಡಿ : ಎಂಟು ವರ್ಷದ ಹಿಂದೆ ನಾನು ಗೋರ್ಟಾಗೆ ಬಂದು ಭೂಮಿ ಪೂಜೆ ಮಾಡಿದ್ದೆ. ಜೊತೆಗೆ ಬಿಜೆಪಿಯ ಯುವ ಮೋರ್ಚಾಗೆ ಸ್ಮಾರಕ ಮಾಡಲು ಹೇಳಿದ್ದೆ. ಅದ್ರಂತೆ ಇವತ್ತು ಗೋರ್ಟಾದ ಸ್ಮಾರಕವನ್ನ ಉದ್ಘಾಟನೆ ಮಾಡಲು ಬಂದಿದ್ದೇನೆ. ಒಂದು ಬಾರಿ ಬಿಜೆಪಿಗೆ ಪೂರ್ಣ ಬಹುಮತ ನೀಡಿ ಅಧಿಕಾರಕ್ಕೆ ತನ್ನಿ. 50 ಕೋಟಿ ವೆಚ್ಚದಲ್ಲಿ ಈ ಸ್ಮಾರಕವನ್ನು ಇನ್ನಷ್ಟು ಅಭಿವೃದ್ಧಿ ಮಾಡಲಾಗುತ್ತದೆ. ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ 50 ಕೋಟಿ ವೆಚ್ಚದಲ್ಲಿ ಇದರ ಅಭಿವೃದ್ಧಿ ಮಾಡಲಾಗುತ್ತದೆ. ತೆಲಂಗಾಣದ ಸರ್ಕಾರ ಇವತ್ತಿಗೂ ಹೈದರಾಬಾದ್ ವಿಮೋಚನಾ ದಿನಾಚರಣೆ ಮಾಡಲು ಸಂತೋಷಪಡ್ತಿದೆ ಎಂದರು.
ಕಾಂಗ್ರೆಸ್ ಪಟೇಲ್ ಸ್ಮರಣೆ ಮಾಡುವುದಿಲ್ಲ-ಅಮಿತ್ ಶಾ: ಕಾಂಗ್ರೆಸ್ ವೋಟ್ ಬ್ಯಾಂಕ್ ಹೆಸರಲ್ಲಿ ಹೈದರಾಬಾದ್ ಕರ್ನಾಟಕ ಮುಕ್ತಿಗೆ ಹೋರಾಡಿದವರ ನೆನಪು ಮಾಡ್ತಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮರಣೆ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಸಲುವಾಗಿ ಮುಸ್ಲಿಂರಿಗೆ 4% ಪ್ರತಿಶತ ನೀಡಿತ್ತು. ಆದ್ರೆ ಬಿಜೆಪಿ ಸರ್ಕಾರ ಮುಸ್ಲಿಂರಿಗೆ ನೀಡಿದ ಮೀಸಲಾತಿಯನ್ನು ತೆಗೆದು ಲಿಂಗಾಯತರಿಗೆ ನೀಡಲಾಗಿದೆ. ಮೀಸಲಾತಿಯಲ್ಲಿ ಸಿಎಂ ಬೊಮ್ಮಾಯಿ ತೆಗೆದುಕೊಂಡ ನಿರ್ಣಯವನ್ನು ಅಮಿತ್ ಶಾ ಅವರು ಶ್ಲಾಘಿಸಿದರು.
ಗೋರ್ಟಾಗೆ ನಾನು ಮತ್ತೆ ಬರುತ್ತೇನೆ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕಾ ಬೇಡ್ವಾ? ಕಾಂಗ್ರೆಸ್ ಪಕ್ಷ ಇಷ್ಟು ವರ್ಷದಿಂದ ಏನೂ ಮಾಡಿಲ್ಲ. ಮೋದಿಜಿನೆ ಸುಪ್ರಿಂಕೋರ್ಟ್ ತೀರ್ಪು ಆದ ತಕ್ಷಣವೇ ರಾಮಂದಿರ ಭೂಮಿ ಪೂಜೆ ಮಾಡಿದ್ರು. ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಸಲುವಾಗಿ 371 ಕಾಪಾಡಿಕೊಂಡು ಬರ್ತಿತ್ತು. ಆದ್ರೆ ಮೋದಿ ಸರ್ಕಾರ 371 ಕಿತ್ತೆಸೆದು ಹಾಕಿದೆ. ಕಾಶ್ಮೀರದಲ್ಲಿ ಯಾವ ಭಯೋತ್ಪಾದನೆಯೂ ಕೂಡ ನಡೆಯೋದಿಲ್ಲ. ಗೋರ್ಟಾಗೆ ನಾನು ಮತ್ತೆ ಬರುತ್ತೇನೆ. ಬಿಜೆಪಿ ಸರ್ಕಾರ 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಗೋರ್ಟಾ ಸ್ಮಾರಕವನ್ನು ಉದ್ಘಾಟನೆ ಮಾಡ್ತೇನೆ ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ: ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, 1948ರ ಗೋರ್ಟಾ ಚಳವಳಿಯಲ್ಲಿ ಹುತಾತ್ಮರಾದವರು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ಅಮಿತ್ ಶಾ ಉದ್ಘಾಟನೆ ಮಾಡಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ ಆಗಿದೆ. ಇತಿಹಾಸ ಪ್ರಸಿದ್ಧವಾದ ಗೋರ್ಟಾ ಗ್ರಾಮ ಹಿಂದುಳಿದಿದೆ ಅನ್ನೋ ಮಾತನ್ನು ಕೇಳಿದ್ದೇವೆ. ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಗೋರ್ಟಾ ಕೂಡ ಅಭಿವೃದ್ಧಿ ಮಾಡುತ್ತೇವೆ. 1948 ರ ಗೋರ್ಟಾ ಹತ್ಯಾಕಾಂಡದಲ್ಲಿ ಮಡಿದವರನ್ನು ಸ್ಮರಿಸುತ್ತೇವೆ. ಸ್ವಾತಂತ್ರ್ಯ ಬಂದ ನಂತರ ಅಖಂಡ ಭಾರತ ಹೋರಾಟಕ್ಕೆ ಕಿಚ್ಚು ಹಚ್ಚಿತ್ತು. ಗೋರ್ಟಾವನ್ನು ಎರಡನೇ ಜಲಿಯನ್ ವಾಲಾಭಾಗ್ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಅಮಿತ್ ಶಾ ಗೆ ಭರವಸೆ ಕೊಡಬಹುದಾ?-ಬಿಎಸ್ವೈ: ದೆಹಲಿಯಿಂದ ಇಲ್ಲಿಯವರೆಗೆ ಅಮಿತ್ ಶಾ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಚುನಾವಣೆ ಬರ್ತಿದೆ. ಅಮಿತ್ ಶಾ ಬಂದಿದ್ದಾರೆ. ಅವರಿಗೆ ಈ ಜಿಲ್ಲೆಯ ಎಲ್ಲಾ ಕ್ಷೇತ್ರ ಗೆದ್ದು ಕೊಡುತ್ತೇವೆ ಅಂತಾ ಕೈ ಎತ್ತಿ ಹೇಳಿ. ಬೀದರ್ ಜಿಲ್ಲೆಯ ಎಲ್ಲಾ ಕ್ಷೇತ್ರ ಗೆಲ್ಲುವ ಮೂಲಕ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ. ಬೀದರ್ ಜಿಲ್ಲೆಯ ಕ್ಷೇತ್ರ ಗೆಲ್ಲಿಸುತ್ತೇವೆ ಅಂತಾ ನಾನು ಅಮಿತ್ ಶಾ ಗೆ ಭರವಸೆ ಕೊಡಬಹುದಾ ಅಂತಾ ಯಡಿಯೂರಪ್ಪ ಕೇಳಿದ್ರು.
ಕಾಂಗ್ರೆಸ್ ನಲ್ಲಿ ನಾನೇ ಮುಖ್ಯಮಂತ್ರಿ ಅಂತಾ ಅಲ್ಲೊಬ್ಬ ಇಲ್ಲೊಬ್ಬ ಕುಣಿಯುತ್ತಿದ್ದಾರೆ. ಆದ್ರೆ ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ. ಒಂದು ಕಡೆ ಮೋದಿ, ಇನ್ನೊಂದು ಕಡೆ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದುಕೊಡತ್ತೇವೆ ಎಂದು ಬಿಎಸ್ವೈ ತಿಳಿಸಿದರು.
ಇದನ್ನೂ ಓದಿ : ಬೆಂಗಳೂರಿಗೆ ಇಂದು ಅಮಿತ್ ಶಾ: ಟ್ರಾಫಿಕ್ ಜಾಮ್ ಸಾಧ್ಯತೆ, ಪರ್ಯಾಯ ಮಾರ್ಗ ಬಳಸಲು ಸೂಚನೆ