ಬೀದರ್: ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಬೀದರ್ - ಔರಾದ್ ಮಾರ್ಗದ ಕೌಠಾ (ಬಿ) ಬಳಿಯ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ (ಬ್ರಿಡ್ಜ್) ಹತ್ತಿರದ ರಸ್ತೆ ಕುಸಿದಿದೆ. ಹೀಗಾಗಿ ಈ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸೇತುವೆಗೆ ಹೊಂದಿಕೊಂಡಿರುವ ರಸ್ತೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸೇತುವೆ ಮೇಲೆ ಸದ್ಯ ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದೊಡ್ಡ ವಾಹನಗಳಿಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಪರ್ಯಾಯ ಸಂಚಾರಕ್ಕೆ ಸೂಚನೆ: ಔರಾದ್ ನಿಂದ ಬೀದರ್ ಗೆ ಬರಲು ಹಾಗೂ ಬೀದರ್ ನಿಂದ ಔರಾದ್ ಕಡೆಗೆ ಹೋಗಲು ಪರ್ಯಾಯ ಸಂಚಾರಕ್ಕೆ ಸೂಚಿಸಲಾಗಿದೆ. ಮೂರು ವರ್ಷಗಳ ಹಿಂದಷ್ಟೇ ಸೇತುವೆ ರಿಪೇರಿ ಕೆಲಸ ಮಾಡಲಾಗಿತ್ತು. ಇದೀಗ ಮತ್ತೆ ಸೇತುವೆ ಶಿಥಿಲವಾಗಿದೆ. ಸೇತುವೆ ಬಳಿಯ ರಸ್ತೆ ಕೂಡ ಕುಸಿದಿದೆ. ರಸ್ತೆ ದುರಸ್ತಿ ಆಗುವವರೆಗೂ ದ್ವಿಚಕ್ರ ವಾಹನ ಮತ್ತು ಪಾದಚಾರಿಗಳನ್ನು ಹೊರತುಪಡಿಸಿ ಇತರೆ ಎಲ್ಲ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ನ ಅಭಿಯಾನಕ್ಕಾಗಿ ಅರವಿಂದ ಲಿಂಬಾವಳಿ ಬಂಧಿಸಲಾಗದು : ಗೃಹ ಸಚಿವ ಆರಗ ಜ್ಞಾನೇಂದ್ರ
ಪ್ರಮುಖ ರಾಜ್ಯ ಹೆದ್ದಾರಿ ಇದು: ಬೀದರ್ - ಔರಾದ್ ಮೂಲಕ ಅಂತಾರಾಜ್ಯ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ. ಈ ಸೇತುವೆ ಬಂದ್ ಆದ ಹಿನ್ನೆಲೆ ಇಲ್ಲಿ ದಿನನಿತ್ಯ ಸಂಚರಿಸುವ ಸಹಸ್ರಾರು ವಾಹನಗಳು ಸುಮಾರು 15 ಕಿಲೋ ಮೀಟರ್ ಸುತ್ತಿ ಸಂಚರಿಸಬೇಕಾಗಿದೆ. ಸೇತುವೆ ಕೆಲಸ ಮುಗಿಯುವವರೆಗೆ ಜನರ ಸಂಚಾರಕ್ಕೆ ಹೈರಾಣ ಆಗಬೇಕಾಗುತ್ತದೆ. ಬೀದರ್ - ಔರಾದ್ ಮಾರ್ಗ 40 ಕಿ.ಮೀ ಇದೆ. ಸೇತುವೆ ಬಂದ್ ಆಗುವುದರಿಂದ ಪರ್ಯಾರ ರಸ್ತೆಯು 55 ಕಿ.ಮೀ ದೂರವಾಗಲಿದೆ. ಸೇತುವೆ ರಿಪೇರಿ ಆಗುವವರೆಗೆ ಸಮಯ ಜತೆಗೆ ಹಣವನ್ನೂ ಸಹ ವ್ಯಯಿಸುವ ಅನಿವಾರ್ಯತೆ ಇದೆ.
ಇದನ್ನೂ ಓದಿ: ಮೈಸೂರಿನ ಸಿಎಫ್ಟಿಆರ್ಐ ಆವರಣದಲ್ಲಿ ಎರಡು ಚಿರತೆ ಪ್ರತ್ಯಕ್ಷ: ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಚುರುಕು