ಬಸವಕಲ್ಯಾಣ: ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಉದ್ದು ಮತ್ತು ಹೆಸರು ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದಿಂದ ತಾಲೂಕು ಕೃಷಿ ಉತ್ಪನ್ನ ಮರುಕಟ್ಟೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಗರದ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಮುಖಂಡರು, ಬೇಡಿಕೆ ಈಡೇರಿಕೆಗಾಗಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲೂಕಿನಲ್ಲಿ ಉದ್ದು ಮತ್ತು ಹೆಸರು ರಾಶಿ ಈಗಾಗಲೇ ನಡೆಯುತ್ತಿದೆ. ಮಾಡಿದ ರಾಶಿಗೆ ಕೂಲಿ ಕೊಡಲು ಸಹ ಅಗದ ಅಸಹಾಯಕ ಸ್ಥಿತಿಯಲ್ಲಿರುವ ರೈತರು, ಅನಿವಾರ್ಯವಾಗಿ ಸಿಕ್ಕ ಸಿಕ್ಕ ರೇಟ್‌ಗೆ ವ್ಯಾಪಾರಸ್ಥರಿಗೆ ಮಾರಾಟ ಮಾಡ್ತಾರೆ. ಇದನ್ನು ತಪ್ಪಿಸಿ ಆರ್ಥಿಕವಾಗಿ ತೊಂದರೆಯಲ್ಲಿರುವ ರೈತರಿಗೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಕಲ್ಪಿಸಲು ಖರೀದಿ ಕೇಂದ್ರ ತಕ್ಷಣ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಜಮಖಂಡಿ ಮಾತನಾಡಿ, ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಅಸಮರ್ಪಕ ಮಳೆ-ಬೆಳೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಉದ್ದು ಮತ್ತು ಹೆಸರು ಬೆಂಬಲ ಬೆಲೆ ನಿಗದಿಯಾಗಿರುವುದಕ್ಕಿಂತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಿದೆ. ಖರೀದಿ ಕೇಂದ್ರ ಆರಂಭಿಸಿ, ಬೆಂಬಲ ಬೆಲೆಗೆ ಖರೀದಿ ಮಾಡಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಕಾರ್ಯದರ್ಶಿ ಸುಭಾಶ್ ರಗಟೆ ಮಾತನಾಡಿ, ಕಳೆದ ಎರಡು ವರ್ಷದಿಂದ ಸಮರ್ಪಕ ಮಳೆ ಇಲ್ಲದೇ ರೈತರು ಕಷ್ಟ-ನಷ್ಟ ಎದುರಿಸುತ್ತಿದ್ದಾರೆ. ಈ ಬೆಳೆದ ಉದ್ದು-ಹೆಸರಿಗೆ ಸೂಕ್ತ ಬೆಲೆ ಸಿಗದಿದ್ದರೆ, ರೈತರು ಮತ್ತಷ್ಟು ಸಮಸ್ಯೆಗೆ ಸಿಲುಕಲಿದ್ದಾರೆ. ಖರೀದಿ ಕೇಂದ್ರ ಆರಂಭಿಸಿ ರೈತರ ಉತ್ಪನ್ನ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಉಪ ತಹಸೀಲ್ದಾರ್ ರಾಜಕುಮಾರ್ ಅವರಿಗೆ ಸಲ್ಲಿಸಲಾಯಿತು.