ಬಸವಕಲ್ಯಾಣ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಗರದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಸಾರ್ವಜನಿಕರಿಗೆ ಅಗತ್ಯವಿರುವ ಕಿರಾಣಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ತಿಳಿಸಿದರು.
ಶುಕ್ರವಾರ ಮಧ್ಯಾಹ್ನ ನಗರಸಭೆ ಬಳಿ ವ್ಯಾಪಾರಿಗಳ ಪ್ರತ್ಯೇಕ ಸಭೆ ನಡೆಸಿದ ಅವರು, ಅಗತ್ಯ ವಸ್ತುಗಳಿಗಾಗಿ ಜನರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವದು ಎಂದರು.
ಬೆಳಗ್ಗೆ 11ರಿಂದ 2 ಗಂಟೆಯವರೆಗೆ ಕಿರಾಣಿ ಅಂಗಡಿಯವರು ಮನೆಗಳಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಬೇಕು. ಅಂಗಡಿ ಶೆಟರ್ ಮುಚ್ಚಿ ಒಳಗೆ ಪ್ಯಾಕ್ ಮಾಡಿ ಆಹಾರ ಸರಬರಾಜು ನಿಗದಿ ಪಡೆಸಿದ ಏರಿಯಾದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಸರಬರಾಜು ಮಾಡಬೇಕು ಎಂದು ಅಂಗಡಿಗಳ ಮಾಲೀಕರಿಗೆ ಸೂಚಿಸಿದರು.
ಬೆಳಗ್ಗೆ 6 ರಿಂದ 9 ವರೆಗೆ ಹಾಲು, ನೀರು, ಹಣ್ಣು, ತರಕಾರಿ ಪುರೈಕೆ ಮಾಡಬೇಕು. ಅಗತ್ಯ ವಸ್ತುಗಳ ಸರಬರಾಜು ಮಾಡುವರಿಗೆ ಗುರುತಿನ ಚೀಟಿ ನೀಡಲಾಗುವದು. ಅಂಗಡಿ ತೆರೆದು ಅಲ್ಲಿಯೇ ವ್ಯಾಪಾರ ಮಾಡಬಾರದು. ಜನ ಸೇರಲು ಅವಕಾಶ ನೀಡದಂತೆ ನೋಡಿಕೊಳ್ಳಬೇಕು ಎಂದು ಸೂಚಿದರು.