ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅಲ್ಲದೆ, ಅವರ ಆಪ್ತ ಸಹಾಯಕ ಸೇರಿದಂತೆ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.
ಸಚಿವರ ಗನ್ ಮ್ಯಾನ್, ಆಪ್ತ ಸಹಾಯಕ, ಕಾರು ಚಾಲಕರಿಗೆ ಮೊನ್ನೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಕಾರಣಕ್ಕೆ ಕ್ವಾರಂಟೈನ್ ಗೆ ಒಳಗಾಗಿದ್ದ ಸಚಿವ ಪ್ರಭು ಚವ್ಹಾಣ ಅವರು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ದೃಢಪಟ್ಟಿದೆ.
ಅಲ್ಲದೆ ಸಚಿವರ ಜತೆಯಲ್ಲಿರುವ ಅಣ್ಣ ಮಾರುತಿ ಚವ್ಹಾಣ ಅವರ ಮಗನಿಗೂ ಸೋಂಕು ದೃಢಪಟ್ಟಿದೆ. ಸಚಿವರಿಗೆ ಕೆಮ್ಮು, ಜ್ವರ, ನೆಗಡಿ ಸೇರಿದಂತೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲವಾದರೂ ಇತ್ತೀಚೆಗೆ ಅವರ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕೆಂದು ಪ್ರಭು ಚವ್ಹಾಣ ಮನವಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಬೆಂಗಳೂರು ಪ್ರವಾಸದಲ್ಲಿದ್ದ ಸಚಿವ ಪ್ರಭು ಚವ್ಹಾಣ ಅವರು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟಿಲ್ ಅವರೊಂದಿಗೆ ಸಾರ್ವಜನಿಕ ಸಮಾರಂಭದಲ್ಲೂ ಪಾಲ್ಗೊಂಡಿದ್ದರು. ನಂತರ ಬೆಂಗಳೂರು ಪ್ರವಾಸ ಮಾಡಿ ಒಂದು ವಾರದ ಕಾಲ ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ಅವರಲ್ಲಿ ಸೋಂಕು ಪತ್ತೆಯಾಗಿದೆ.
ಈ ನಡುವೆ ಸಚಿವರು ಸಾರ್ವಜನಿಕರಿಗೆ ನೇರವಾಗಿ ಸಂಪರ್ಕಕ್ಕೆ ಸಿಗುವುದು ಕಷ್ಟವಾಗಿದ್ದು, ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.