ಬೀದರ್: ತಾಂತ್ರಿಕ ಕಾರಣದ ನೆಪವೊಡ್ಡಿ 16 ಜನ ಮಹಿಳಾ ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ ಹಿನ್ನೆಲೆ, ಪೌರಕಾರ್ಮಿಕರು ಕಣ್ಣೀರಿಟ್ಟಿದ್ದ ಘಟನೆ ನಡೆದಿತ್ತು. ಈ ಘಟನೆ ಬೆನ್ನಲ್ಲೆ ಪೌರಕಾರ್ಮಿಕರಿಗೆ ಸಚಿವ ಪ್ರಭು ಚವ್ಹಾಣ್ ಸ್ಥಳದಲ್ಲಿಯೇ ನ್ಯಾಯ ಒದಗಿಸಿದ್ದಾರೆ.
ನಗರದ ಅಂಬೇಡ್ಕರ್ ವೃತದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಇಂದು ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿಂದ ಕೆಲಸ ಮಾಡ್ತಿದ್ದ ಪೌರ ಕಾರ್ಮಿಕರನ್ನು ಗುತ್ತಿಗೆದಾರ ವಜಾ ಮಾಡಿದ್ದರು. ಇದರಿಂದ ಕಂಗಾಲಾದ ಮಹಿಳಾ ಕಾರ್ಮಿಕರು ಸಚಿವ ಪ್ರಭು ಚವ್ಹಾಣ್ ಅವರ ಮುಂದೆ ನೆಲಕ್ಕೆ ಕಾಲು ಬಿದ್ದು ನಮಗೆ ನ್ಯಾಯ ಕೊಡಿ ಎಂದು ಕಣ್ಣಿರು ಹಾಕಿದ್ದಾರೆ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ಥಳದಲ್ಲೇ ಪರಿಹಾರ ನೀಡುವ ಮೂಲಕ ನೊಂದ ಜನರಿಗೆ ನ್ಯಾಯ ನೀಡಿದ ಘಟನೆ ನಡೆದಿದೆ.
ತಕ್ಷಣ ನಗರಸಭೆ ಆಯುಕ್ತ ಬಸಪ್ಪ ಅವರಿಗೆ ಕರೆ ಮಾಡಿದ ಸಚಿವರು, ದೇಶದಲ್ಲಿ ಮಾಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಕೆಲಸದಲ್ಲಿ ಪೌರ ಕಾರ್ಮಿಕರ ಕಾರ್ಯಕ್ಕೆ ಸ್ಲಾಘನೆ ಮಾಡ್ತಿದ್ದರೆ ನೀವು ಅವರನ್ನು ವಜಾ ಮಾಡ್ತಿರಾ. ಕಾರಣ ಏನೇ ಇದ್ದರೂ ಈ ಮಹಿಳಾ ಕಾರ್ಮಿಕರನ್ನು ಬೇಷರತ್ ಕೆಲಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಿ ಎಂದು ಖಡಕ್ ವಾರ್ನಿಂಗ್ ನೀಡಿದರು.
ಇದರಿಂದ ಕೆಲಸ ಕಳೆದುಕೊಂಡಿದ್ದ ಪೌರ ಕಾರ್ಮಿಕರಿಗೆ ಅವರ ಕೆಲಸ ಉಳಿದಿದೆ. ಅವರ ಸ್ಥಾನದಲ್ಲಿ ಬೇರೆಯವರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಹುನ್ನಾರ ನಡೆದಿತ್ತು ಎನ್ನಲಾಗಿದ್ದು, ಸಚಿವ ಪ್ರಭು ಚವ್ಹಾಣ್ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.