ಬೀದರ್: ಜಿಲ್ಲೆಯ ತರಕಾರಿ ವ್ಯಾಪಾರಿಗಳನ್ನು ಬಿಟ್ಟರೆ ಸಣ್ಣ ಪುಟ್ಟ ಬೀದಿ ವ್ಯಾಪಾರಿಗಳ ಬದುಕು ಲಾಕ್ಡೌನ್ನಿಂದ ಸಂಕಟಕ್ಕೆ ಸಿಲುಕಿದೆ. ಚಾಟ್, ವಡಾಪಾವ್, ಐಸ್ ಕ್ರೀಂ, ಫ್ರೂಟ್ಸ್ ಸೇರಿದಂತೆ ಹಲವು ತಿನಿಸುಗಳ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಈಗ ಊಟಕ್ಕಿಲ್ಲದ ಸ್ಥಿತಿ ತಲುಪಿದ್ದಾರೆ.
ಲಾಕ್ಡೌನ್ ಘೋಷಣೆಯಾಗಿ 15 ದಿನಗಳು ಮೀರಿದ್ದು, ಈ ವೇಳೆ ಸಾಲ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ ಇಲ್ಲಿನ ಜನರು. ದಿನಕ್ಕೆ 400 ರಿಂದ 500 ರೂಪಾಯಿ ದುಡಿಯುತ್ತಿದ್ದ ಅವರು ಲಾಕ್ಡೌನ್ನಿಂದಾಗಿ ಪೂರ್ತಿ ಕಂಗಾಲಾಗಿದ್ದಾರೆ. ನಮ್ಮ ನೆರವಿಗೆ ಸರ್ಕಾರ ಬರಬೇಕು. ನೆರೆಯ ರಾಜ್ಯಗಳ ಮಾದರಿಯಲ್ಲಿ ತಿಂಗಳಿಗೆ ಒಂದಿಷ್ಟು ಹಣ ನೀಡಬೇಕು, ಅಥವಾ ಪರಿಹಾರದ ಕಿಟ್ ನೀಡಬೇಕು, ಜಿಲ್ಲಾಡಳಿತ ಸಹಾಯಕ್ಕೆ ಧಾವಿಸಬೇಕು ಅನ್ನೋದು ಅವರ ಮನವಿಯಾಗಿದೆ.
ಇನ್ನೊಂದೆಡೆ ಬೀದರ್ನ ಭಾಲ್ಕಿ ಪಟ್ಟಣದ ಬಳಿ 200ಕ್ಕೂ ಅಧಿಕ ಮಂದಿ ಲಾಕ್ಡೌನ್ಗೆ ಸಿಲುಕಿ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ತಾವು ಬೇರೆ ರಾಜ್ಯದವರಾದ ಕಾರಣ ಇಲ್ಲಿ ಯಾರೂ ನಮ್ಮನ್ನು ವಿಚಾರಿಸಿಕೊಳ್ಳುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಬೀಡ್, ಪರಭಣಿ, ನಾಂದೇಡ್, ಲಾತೂರ್ ಹಾಗೂ ತೆಲಂಗಣ, ಆಂಧ್ರ ಪ್ರದೇಶದ ವಿವಿಧ ಭಾಗಗಳಿಗೆ ಸೇರಿದ ಇವರು ಎರಡೊತ್ತಾದ್ರೂ ಊಟ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ನೆರೆ ರಾಜ್ಯದಿಂದ ಬದುಕಲು ಬಂದ ಈ ಕುಟುಂಬಗಳು ರಾಜ್ಯದ ಯಾವುದೇ ಯೋಜನೆಯ ಲಾಭ ಪಡೆದಿಲ್ಲ. ಮೇಲಾಗಿ ಲಾಕ್ಡೌನ್ ಆದ ಮೇಲೆ ತಾಲೂಕು ಆಡಳಿತ ಇವರಿಗೆ ಸೂಕ್ತ ವ್ಯವಸ್ಥೆ ಮಾಡಲು ಮುಂದೆ ಬರ್ತಿಲ್ಲ. ಇನ್ನೂ ಶೋಚನೀಯ ಸಂಗತಿ ಎಂದರೆ ಇವರು ಮಹಾರಾಷ್ಟ್ರದಲ್ಲಿ ಇವರು ವಾಸ ಮಾಡುತ್ತಿದ್ದ ಗ್ರಾಮಗಳ ಜನರೂ ಕೂಡಾ ಊರುಗಳಿಗೆ ಬರ್ಬೇಡಿ ಅಂತ ಹೇಳ್ತಿದ್ದಾರಂತೆ