ಬೀದರ್: ದಿಲ್ಲಿ ಎಲೆಕ್ಷನ್ ಮೂಡಿನಿಂದ ಹೊರ ಬರುವ ಮೊದಲೇ ಗಲ್ಲಿ ಎಲೆಕ್ಷನ್ ಕಾವು ರಂಗೇರುತ್ತಿದ್ದು, ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಹಗಲಿರುಳು ಕಸರತ್ತು ನಡೆಸುತ್ತಿವೆ.
ಜಿಲ್ಲೆಯ ಬಸವಕಲ್ಯಾಣ, ಔರಾದ್, ಭಾಲ್ಕಿ, ಹುಮನಾಬಾದ್ ಹಾಗೂ ಚಿಟಗುಪ್ಪ ಸ್ಥಳೀಯ ಸಂಸ್ಥೆಗಳ 128 ವಾರ್ಡ್ಗಳಿಗೆ ಮೇ.29ರಂದು ಸ್ಥಳೀಯ ಮಟ್ಟದ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಸುಡು ಬಿಸಿಲಿನಲ್ಲೂ ಕಾಲಿಗೆ ಗೆಜ್ಜೆ ಕಟ್ಟಿಕೊಂಡವರಂತೆ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಔರಾದ್ನಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟ್:
ಔರಾದ್ ಪಟ್ಟಣ ಪಂಚಾಯತ್ನ 19 ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದ ಗೆಲುವು ಸಾಧಿಸಿದ ಹುರುಪಿನಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಸ್ಥಳೀಯ ಶಾಸಕ ಪ್ರಭು ಚವ್ಹಾಣ್ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿಡಿತದಲ್ಲಿರುವ ಪಟ್ಟಣ ಪಂಚಾಯತ್ ಮೇಲೆ ಬಿಜೆಪಿ ಅಧಿಕಾರ ಸಾಧಿಸುವುದಾಗಿ ಭರವಸೆ ವ್ಯಕ್ತಪಡಿಸಿದೆ.
ಇನ್ನೂ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವಾರ್ಡ್ಗಳಲ್ಲಿ ಪ್ರಚಾರ ಮಾಡುತ್ತಿದ್ದು, ಕೈ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಕಣದಲ್ಲಿ ಒಟ್ಟು 430 ಅಭ್ಯರ್ಥಿಗಳಿದ್ದಾರೆ.
ನೀರು ಕೊಟ್ಟು ಓಟ್ ಕೇಳುತ್ತಿರುವ ಅಭ್ಯರ್ಥಿಗಳು:
ಭಯಂಕರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಔರಾದ್ ನಿವಾಸಿಗರ ಪಾಲಿಗೆ ಚುನಾವಣೆ ಘೋಷಣೆಯಾಗಿದ್ದು ಮರುಭೂಮಿಯಲ್ಲಿ ಓಯಸಿಸ್ ಬಂದ ಹಾಗೆ ಆಗಿದೆ. ಜಿಲ್ಲಾಡಳಿತ ಎಷ್ಟೇ ಪ್ರಯತ್ನ ಪಟ್ಟರು ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಚುನಾವಣೆ ಘೋಷಣೆ ಆದಾಗಿನಿಂದ ಅಭ್ಯರ್ಥಿಗಳು ಟ್ಯಾಂಕರ್ ಮೂಲಕ ಜನರಿಗೆ ನೀರು ಕೊಟ್ಟು ಮತ ಕೇಳುತ್ತಿದ್ದಾರೆ. ಪರಿಣಾಮ ಪ್ರತಿ ಬಡಾವಣೆಗೆ ದಿನಕ್ಕೆ 15 ರಿಂದ 20 ಟ್ಯಾಂಕರ್ ನೀರು ಹರಿಸಲಾಗುತ್ತಿದೆ. ಇದು ಜನರ ಖುಷಿಗೆ ಕಾರಣವಾಗಿದೆ.
![Bidar](https://etvbharatimages.akamaized.net/etvbharat/prod-images/3397444_thumddasd.jpg)
ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ವಾರ್ಡ್ಗಳ ವಿವರ:
* ಬಸವಕಲ್ಯಾಣ ನಗರಸಭೆ- 31 ವಾರ್ಡ್
* ಹುಮನಾಬಾದ್ ಪುರಸಭೆ-27 ವಾರ್ಡ್
* ಚಿಟಗುಪ್ಪ ಪುರಸಭೆ-23 ವಾರ್ಡ್
* ಭಾಲ್ಕಿ ಪುರಸಭೆ-27 ವಾರ್ಡ್
* ಔರಾದ್(ಬಿ) ಪಟ್ಟಣ ಪಂಚಾಯತ್-20 ವಾರ್ಡ್