ಬೀದರ್: ಮಾಜಿ ಶಾಸಕ ಡಾ. ವಿಜಯಕುಮಾರ್ ಖಂಡ್ರೆ ನಿಧನ ಹಿನ್ನಲೆಯಲ್ಲಿ ಭಾಲ್ಕಿ ಪಟ್ಟಣ ಶೋಕಸಾಗರದಲ್ಲಿ ಮುಳುಗಿದೆ.
ಹೃದಯಾಘಾತದಿಂದ ಸಾವನ್ನಪ್ಪಿರುವ ಮಾಜಿ ಶಾಸಕ ಡಾ. ವಿಜಯಕುಮಾರ್ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ ೨ ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಬಳಿಕ ಮೆರವಣಿಗೆ ಮೂಲಕ ಚಿಕಲಚಿಂದಾ ರಸ್ತೆಯಲ್ಲಿರುವ ಶಾಂತಿ ಧಾಮದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.
ಪಟ್ಟಣದಲ್ಲಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡುವ ಮೂಲಕ ಅಗಲಿದ ನಾಯಕನಿಗೆ ಕಂಬನಿ ಮೆರೆದಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಡಾ. ವಿಜಯಕುಮಾರ್ ಖಂಡ್ರೆ ಅವರ ಅಂತಿಮ ದರ್ಶನ ಪಡೆದರು.
ಗಣ್ಯರ ಸಂತಾಪ:
ಸಚಿವರಾದ ರಾಜಶೇಖರ್ ಪಾಟೀಲ್, ಬಂಡೆಪ್ಪ ಕಾಶೆಂಪೂರ್, ರಹೀಂಖಾನ್, ಶಾಸಕರಾದ ಬಿ.ನಾರಾಯಣರಾವ್, ಪ್ರಭು ಚವ್ಹಾಣ್, ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದ ಅರಳಿ, ರಘುನಾಥ್ ಮಲ್ಕಾಪೂರೆ, ಚಂದ್ರಶೇಖರ್ ಪಾಟೀಲ್ ಸೇರಿದಂತೆ ಹಲವು ನಾಯಕರು ಅಗಲಿದ ನಾಯಕನ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.