ಬಸವಕಲ್ಯಾಣ(ಬೀದರ್): ಖೋಟಾ ನೋಟು ಚಲಾವಣೆಯಲ್ಲಿ ನಿರತನಾಗಿದ್ದ ಆರೋಪಿಯನ್ನು ಬಂಧಿಸಿರುವ ಮಂಠಾಳ ಠಾಣೆ ಪೊಲೀಸರು ಇನ್ನೂ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಲಾತೂರ ನಿವಾಸಿ ಖಮರೋದ್ದಿನ್ ಖಾಜಾ ಅಹಮದ್ ಖಾಜಿ ಬಂಧಿತ ಆರೋಪಿ.
ಆರೋಪಿ ಮಹಾರಾಷ್ಟ್ರದ ನಾಂದೇಡನ ಅಬ್ದುಲ್ ಹಸಿಬ್ ಅಲಿಯಾಸ್ ಅಬ್ದುಲ್ ಹಬೀಬ್ ಎಂಬಾತನಿಂದ 200ರ ಮುಖ ಬೆಲೆಯ ಸುಮಾರು 220 ಖೋಟಾ ನೋಟುಗಳನ್ನು (44 ಸಾವಿರ) ಪಡೆದು ಮಂಠಾಳ ಗ್ರಾಮಕ್ಕೆ ಆಗಮಿಸಿದ್ದನು. ಈತ ತನ್ನ ಸಂಬಂಧಿಕ ತಸ್ಲೀಮ್ ಅಜಿಮೋದ್ದಿನ್ ಪಿಂಜಾರ್ ಸಹಾಯ ಪಡೆದು ಸಾರ್ವಜನಿಕರಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ. ಗ್ರಾಮದ ಸರ್ಕಾರಿ ಆಸ್ಪತ್ರೆ ಸಮೀಪ ಗಸ್ತಿನಲ್ಲಿ ತಿರುಗುತ್ತಿದ್ದ ಪೊಲೀಸರು ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಮಂಠಾಳ ಗ್ರಾಮದಲ್ಲಿ ಕಳೆದ ಮೂರು ತಿಂಗಳಲ್ಲಿ 2ನೇ ಬಾರಿಗೆ ಖೋಟಾ ನೋಟು ಚಲಾವಣೆ ಪ್ರಕರಣ ಬಯಲಿಗೆ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ತಂಡ ತನಿಖೆ ನಡೆಸಿ, ಇತರ ಆರೋಪಿಗಳ ಬಂಧನಕ್ಕೆ ಜಾಲಬೀಸಿದೆ.
ಇದನ್ನೂ ಓದಿ:ಅತ್ತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಆರೋಪ: ವ್ಯಕ್ತಿ ಕೊಲೆ ಮಾಡಿದ ಅಳಿಯ