ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಗ್ರಾಮದ ಬಾಲಕಿಯನ್ನ ಕೊಲೆಗೈದಿರುವ ಆರೋಪದ ಅಡಿಯಲ್ಲಿ ಪೋಷಕರು, ಸಂಬಂಧಿಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೃತ ಬಾಲಕಿ ಪೋಷಕರಾದ ಭೀಮಪ್ಪ ತಂದೆ ಹನುಮಪ್ಪ, ಹನುಮಂತ ತಂದೆ ಹನುಮಪ್ಪ, ಅಂಜಿನಪ್ಪ ತಂದೆ ಸಿದ್ದಪ್ಪ, ನಾಗರಾಜ ತಂದೆ ಸಿದ್ದಪ್ಪ, ಸುರೇಶ ತಂದೆ ಸಿದ್ದಪ್ಪ, ಅಂಜಿನಮ್ಮ ಗಂಡ ಸುರೇಶ, ಕೆ.ಬಿ.ದುರುಗಪ್ಪ ತಂದೆ ಭೀಮಪ್ಪ ಹಾಗೂ ಇತರರ ವಿರುದ್ಧ ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಅನ್ಯ ಜಾತಿಯ ಯುವಕನೊಂದಿಗೆ ಓಡಿ ಹೋಗಿದ್ದಾಳೆ ಎಂಬ ಕಾರಣಕ್ಕಾಗಿ ಬಾಲಕಿ ಕುಟುಂಬಸ್ಥರು ಆಕೆಗೆ ಮಾನಸಿಕವಾಗಿ ಹಿಂಸೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಬಾಲಕಿ ಕ್ರಿಮಿನಾಶಕ ಸೇವಿಸಿದ್ದಳು. ಅಸ್ವಸ್ಥಗೊಂಡ ಬಾಲಕಿಯನ್ನ ಬೈಕ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾಳೆ.
ಆಕೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆ (ಪಿಎಂ) ಮಾಡಿಸದೆ ದಹನ ಮಾಡಿದ್ದರು. ಅದನ್ನ ಮರ್ಯಾದಾ ಹತ್ಯೆ ಎಂದೂ ಶಂಕಿಸಲಾಗಿತ್ತು. ಈ ಘಟನೆ ನಡೆದು ಮೂರು ದಿನಗಳ ಬಳಿಕ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಕುರಿತು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ: ಮನೆ ಬಿಟ್ಟು ಲವರ್ ಜೊತೆ ಹೋದ ಮಗಳು... ಕೊಲೆಗೈದು ಸುಟ್ಟು ಹಾಕಿದ್ರಾ ಕುಟುಂಬಸ್ಥರು!?