ಬಳ್ಳಾರಿ: ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಿಎಂ ಆಗುವುದಿರಲಿ, ಡಿ ಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಡಾ ಜಿ ಪರಮೇಶ್ವರ್ ಗೆದ್ದರೆ ಮುಖ್ಯಮಂತ್ರಿ ಆಗ್ತಾರೆ ಎಂದು ಸಿದ್ದರಾಮಯ್ಯ ಅವರನ್ನೇ ಸೋಲಿಸಿದ್ದರು ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದರು. ಬಳ್ಳಾರಿಯಲ್ಲಿ ಕೇಂದ್ರ ಸರ್ಕಾರ ವಿತರಿಸಿರುವ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವ ಸ್ಟಿಕ್ಕರ್ ಅನ್ನು ಸಾರಿಗೆ ಬಸ್ಗಳಿಗೆ ಅಂಟಿಸಿದ ನಂತರ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸಿಎಂ ಬದಲಾಗುತ್ತಾರೆಂದು ಟ್ವೀಟ್ ಮಾಡುವವರಿಗೆ ಬುದ್ಧಿ ಭ್ರಮಣೆಯಾಗಿದೆ. ಅವರು ಅಧಿಕಾರಕ್ಕೆ ಬರೋದಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ನಮ್ಮ ಪಕ್ಷದ ಸಿಎಂ ಬದಲಾವಣೆ ವಿಚಾರದಲ್ಲಿ ಮಾತನಾಡಲು ಇವರ್ಯಾರು?. ಜನರಲ್ಲಿ ವಿಶ್ವಾಸ ಗಳಿಸಿಕೊಳ್ಳುವ ಯೋಗ್ಯತೆ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ 3 ವರ್ಷಕ್ಕೊಮ್ಮೆ ನಡೆಯುತ್ತದೆ. ಅದೆಲ್ಲಾ ಪಾರ್ಟಿ ತೀರ್ಮಾನ. ನಾನು ಹೋರಾಟದಿಂದ ಬಂದವನು. ರಾಜ್ಯಾಧ್ಯಕ್ಷ ಸ್ಥಾನವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನನಗೆ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಿದ್ರೆ ವಹಿಸಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ: ಎನ್ಎಂಡಿಸಿ ಕಂಪನಿ ನೇಮಕಾತಿ ವಿವಾದ: ಸಚಿವ ಶ್ರೀರಾಮುಲು ಹೇಳಿದ್ದೇನು?
ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ವೇತನ ಪರಿಷ್ಕರಿಸಲಾಗುತ್ತದೆ. ಡೀಸೆಲ್ ಖರೀದಿ ಸೇರಿದಂತೆ ಇತರ ವೆಚ್ಚಕ್ಕೆ 900 ಕೋಟಿ ರೂ.ಗಳನ್ನು ನೀಡಲಾಗಿದೆ. ಈಗ ನಿವೃತ್ತಿಯಾಗುವ ಚಾಲಕನ ಫಿಟ್ನೆಸ್ ನೋಡಿ, ಒಂದು ವರ್ಷದವರೆಗೆ ಸೇವೆ ಮುಂದುವರಿಸಲು ಚಿಂತನೆ ನಡೆದಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.