ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹತ್ತಿರ ಇರುವ ಯಲ್ಲಮ್ಮನ ಹಳ್ಳದ ಸೇತುವೆಯ ಮೇಲೆ ಪ್ರತಿ ವರ್ಷ ಮಳೆ ಬಂದಾಗಲೆಲ್ಲ ನೀರು ಹರಿದು ಹೋಗುತ್ತದೆ. ಹೀಗಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೇ ಈ ವರ್ಷವೂ ಇಲ್ಲಿನ ಜನರ ಗೋಳು ತಪ್ಪದಂತಾಗಿದೆ.
ಕಾಮಗಾರಿ ಸಂಬಂಧವಾಗಿ ನಿರ್ಮಿಸಿದ ಪೂರಕ ಸೇತುವೆ ಮೇಲೆ ನೀರು ಬಂದಿದ್ದರಿಂದ ಸಂಪೂರ್ಣ ಕೊಚ್ಚಿ ಹೋಗಿ ಅಂತಾರಾಜ್ಯ ಸಂಪರ್ಕ ಬಂದ್ ಆಗಿದೆ. ಹಣ್ಣು, ತರಕಾರಿ ಸೇರಿದಂತೆ ದಿನ ನಿತ್ಯದ ಅಗತ್ಯ ವಸ್ತುಗಳು ಅಂತರಾಜ್ಯದ ಗಡಿಭಾಗಗಳಲ್ಲಿ ಸಂಚರಿಸುವ ವಾಹನಗಳು ಕಿ.ಮೀಟರ್ ಗಟ್ಟಲೇ ನಿಂತಿವೆ. ಚಿಕಿತ್ಸೆ, ರಸಗೊಬ್ಬರ ಮತ್ತು ಕ್ರಿಮಿನಾಶಕ ಖರೀದಿಗೆ ಆಗಮಿಸುವ ರೈತರಿಗೂ ತೊಂದರೆಯಾಗಿದ್ದು, ಸಾರ್ವಜನಿಕರು ಗುತ್ತಿಗೆದಾರನಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಂತಾರಾಜ್ಯ ಸೇರಿದಂತೆ ನೂರಾರು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. ಸರ್ಕಾರ ಇದಕ್ಕೆ ಸೇತುವೆ ನಿರ್ಮಿಸಲು ಯೋಜನೆ ಹಾಕಿ ಕಾಮಗಾರಿಗೆ ಚಾಲನೆ ಕೊಟ್ಟಿದ್ದರೂ ಈ ವರ್ಷದ ಮಳೆಗಾಲಕ್ಕೂ ಯಥಾಸ್ಥಿತಿ ಮುಂದುವರೆದಿದೆ. ಇದರಿಂದ ಸೀಮಾಂದ್ರಕ್ಕೆ ಓಡಾಡುವ ವಾಹನಗಳಿಗೆ ತೊಂದರೆಯಾಗದಂತೆ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ಆದರೆ ಈ ತಾತ್ಕಾಲಿಕ ರಸ್ತೆ ಮಳೆ ನೀರಿಗೆ ಕೊಚ್ಚಿ ಹೋಗಿ ವಾರವೇ ಗತಿಸಿದೆ. ಇನ್ನೂ ಸಂಚಾರಕ್ಕೆ ರಸ್ತೆ ಮಾತ್ರ ಸಿದ್ದಗೊಂಡಿಲ್ಲ.
50 ಮೀಟರ್ ಸೇತುವೆ ದಾಟಲು 10 ಕಿ.ಮೀ ಸುತ್ತುಹಾಕಿ ಸಂಚಾರ ಮಾಡಬೇಕಾದ ಪರಿಸ್ಥಿತಿಯನ್ನ ಪ್ರಯಾಣಿಕರು ಎದುರಿಸುತ್ತಿದ್ದಾರೆ