ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ವ್ಯಾಪ್ತಿಯ ಬಸರಕೋಡು ಗ್ರಾಮದ ಹೊರ ವಲಯದ ಕುಡಿಯುವ ನೀರಿನ ಕೆರೆಯಲ್ಲಿ ಪಾಚಿಗಟ್ಟಿದೆ. ಆ ನೀರನ್ನೇ ಗ್ರಾಮದ ಕುಡಿಯುವ ನೀರಿನ ಟ್ಯಾಂಕರ್ಗೆ ಪೂರೈಕೆ ಮಾಡಲಾಗುತ್ತಿದೆ. ಪರಿಣಾಮ ಜನ ಇದೀಗ ಡೆಂಘೀ ಕಾಯಿಲೆ ಎದುರಿಸುತ್ತಿದ್ದಾರೆ.
ಬಸರಕೋಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಇದೆ. ಅಂದಾಜು 600 ಕ್ಕೂ ಅಧಿಕ ಮನೆಗಳಿವೆ. 4000 ಅಧಿಕ ಜನಸಂಖ್ಯೆಯನ್ನ ಈ ಗ್ರಾಮ ಹೊಂದಿದೆ. ಆದರೆ, ಕಳೆದೊಂದು ವಾರದಿಂದ ಡೆಂಘೀ ಸೇರಿದಂತೆ ನಾನಾ ಸಾಂಕ್ರಾಮಿಕ ಕಾಯಿಲೆಗಳು ಆವರಿಸಿಕೊಂಡು ಗ್ರಾಮಸ್ಥರನ್ನ ಬೆಚ್ಚಿಬೀಳಿಸಿದೆ.
![Basaragodu Grama Panchayat Office](https://etvbharatimages.akamaized.net/etvbharat/prod-images/kn-bly-1-drinking-water-problem-sty-bite-vsl-ka10056_13082021170312_1308f_1628854392_304.jpg)
ಈ ಪಾಚಿ ಗಟ್ಟಿದ ಕೆರೆಯ ನೀರನ್ನ ಗ್ರಾಮದ ಕುಡಿಯುವ ನೀರಿನ ಟ್ಯಾಂಕರ್ಗಳಿಗೆ ಪೂರೈಕೆ ಮಾಡಿರೋದು ಇದಕ್ಕೆ ಬಹು ಮುಖ್ಯ ಕಾರಣ ಎಂದು ಹೇಳಲಾಗುತ್ತೆ. ಕಳೆದ 15 ದಿನಗಳ ಹಿಂದಷ್ಟೇ ಆರೋಗ್ಯ ಇಲಾಖೆಯ ಅಧಿಕಾರವರ್ಗ ಬಸರಕೋಡು ಗ್ರಾಮಕ್ಕಾಗಮಿಸಿ, ಈ ಪಾಚಿಗಟ್ಟಿದ ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಿದ್ದರು. ಆದರೂ ಆ ಗ್ರಾಮ ಪಂಚಾಯಿತಿ ಮಾತ್ರ ಅದನ್ನು ಲೆಕ್ಕಿಸದೇ ಗ್ರಾಮಸ್ಥರಿಗೆ ಅದೇ ಕೆರೆಯಿಂದ ಕುಡಿಯುವ ನೀರು ಪೂರೈಕೆ ಮಾಡಲು ಮುಂದಾಗಿತ್ತು. ಪರಿಣಾಮ ಇದೀಗ ಸಾಂಕ್ರಾಮಿಕ ಕಾಯಿಲೆಯಿಂದ ಇಡೀ ಗ್ರಾಮಸ್ಥರು ಬಳಲುತ್ತಿದ್ದಾರೆ.
![lake](https://etvbharatimages.akamaized.net/etvbharat/prod-images/kn-bly-1-drinking-water-problem-sty-bite-vsl-ka10056_13082021170312_1308f_1628854392_149.jpg)
ಬಸರಕೋಡು ಗ್ರಾಮದ ಪ್ರತಿಯೊಂದು ಮನೆ- ಮನೆಗೆ ಭೇಟಿ ನೀಡಿದ್ರೆ ಸಾಕು. ಮನೆಯಲ್ಲಿ ಒಂದಿಬ್ಬರಾದ್ರೂ ಈ ಡೆಂಘೀ ಜ್ವರದಿಂದ ಬಳಲುತ್ತಿರೋದು ಕಾಣಸಿಗುತ್ತೆ. ಕಲುಷಿತ, ಪಾಚಿಗಟ್ಟಿದ ನೀರು ಸೇವನೆಯಿಂದ ಕೆಲವರು ಜ್ವರ, ಕೆಮ್ಮು ಹಾಗೂ ನೆಗಡಿಯಂತಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸರಿಸುಮಾರು 300ಕ್ಕೂ ಅಧಿಕ ಮಂದಿ ಈ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರೋದು ಕೂಡ ಈಗ ಬೆಳಕಿಗೆ ಬಂದಿದೆ.
ಮಾಹಿತಿಯೇ ಗೊತ್ತಿಲ್ಲವಂತೆ: ಪ್ರತಿಯೊಬ್ಬರೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಬರೋಬ್ಬರಿ 15 ರಿಂದ 20 ಸಾವಿರ ಹಣ ವ್ಯಯ ಮಾಡಿಕೊಂಡಿದ್ದಾರಂತೆ. ಇಷ್ಟೆಲ್ಲಾ ಆದರೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಹೆಚ್.ಎಲ್.ಜನಾರ್ದನ್ ಅವರಿಗೆ ಮಾಹಿತಿಯೇ ಗೊತ್ತಿಲ್ಲವಂತೆ.
![Report on pollution of lake water](https://etvbharatimages.akamaized.net/etvbharat/prod-images/kn-bly-1-drinking-water-problem-sty-bite-vsl-ka10056_13082021170312_1308f_1628854392_4.jpg)
ಇಷ್ಟೆಲ್ಲಾ ಅವಾಂತರ ಆಗಿದೆ: ಈ ಕುರಿತು ಗ್ರಾಮದ ವಯೋವೃದ್ಧೆ ಮರಿಬಸಮ್ಮ ಅವರು ಮಾತನಾಡಿದರು. ಆ ಕೆರೆಯಲ್ಲಿ ಪಾಚಿಗಟ್ಟಿದ ನೀರು ಇದ್ದರೂ, ನಮ್ಮ ಮನೆಗಳಲ್ಲಿನ ಪಗಡೆ- ಪಾತ್ರೆಗಳಲ್ಲಿ ತುಂಬಿಟ್ಟುಕೊಂಡಿರುವ ನೀರಿನ ಬಗ್ಗೆ ಜಾಗೃತಿ ಮೂಡಿಸೋದು ಅದೆಷ್ಟು ನ್ಯಾಯ. ಮೊದಲು ಈ ಗ್ರಾಮ ಪಂಚಾಯಿತಿಯವರು, ಕೆರೆಯನ್ನ ಶುಚಿಗೊಳಿಸಬೇಕಿತ್ತು. ಆದರೆ, ಅದನ್ನ ಮಾಡದೇ ಏಕಾಏಕಿ ಗ್ರಾಮದ ಟ್ಯಾಂಕರ್ಗೆ ಆ ನೀರನ್ನ ಪೂರೈಕೆ ಮಾಡಿದ್ದರಿಂದಲೇ ಇಷ್ಟೆಲ್ಲ ಅವಾಂತರ ಆಗಿದೆ ಎಂದರು.
ಸಾಂಕ್ರಾಮಿಕ ಕಾಯಿಲೆ: ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಂಜಿನಪ್ಪ ಮಾತನಾಡಿ, ಬಸರಕೋಡು ಗ್ರಾಮಕ್ಕೆ ಕೆರೆಯ ನೀರು ಪೂರೈಕೆ ಮಾಡೋ ಮೊದಲೇ ಕುಡಿಯಲು ಯೋಗ್ಯವಲ್ಲ ಎಂದು ಆರೋಗ್ಯ ಇಲಾಖೆ ಮುನ್ಸೂಚನೆ ನೀಡಿದೆ. ಆದರೂ ಸಹ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರು ಮೊಂಡು ಧೈರ್ಯ ಮಾಡಿ ಪೂರೈಕೆ ಮಾಡಿದ್ದಾರೆ. ಅದರಿಂದಾಗಿ ಇಡೀ ಗ್ರಾಮವೇ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುವಂತಾಗಿದೆ ಎಂದು ದೂರಿದ್ದಾರೆ.
ಓದಿ: ನಾಗರಪಂಚಮಿ ಹಾಲು ಚೆಲ್ಲುವ ಹಬ್ಬವಲ್ಲ, ಕುಡಿಸುವ ಹಬ್ಬ.. ಮಕ್ಕಳಲ್ಲೇ ದೇವರನ್ನ ಕಂಡ ಬಸವಪ್ರಭು ಶ್ರೀಗಳು..