ಬಳ್ಳಾರಿ: ಕಳ್ಳರು ಓಡಿ ಬಂದಂತೆ ಓಡಿ ಬರ್ತಾರೆ. ಟಿವಿಯಲ್ಲಿ ನೋಡಿದ್ದೀರಲ್ವಾ? ನಾಚಿಕೆಯಾಗ್ಬೇಕು ಎಂದು ಮುಜರಾಯಿ ಸಚಿವ ಪಿ ಟಿ ಪರಮೇಶ್ವರ ನಾಯಕ್ ಅತೃಪ್ತ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ನಡೆದ ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವೀಕರ್ ಕಚೇರಿಗೆ ಆರು ಗಂಟೆಯೊಳಗೆ ಹಾಜರಾಗಿ ಲಿಖಿತ ರೂಪದ ರಾಜೀನಾಮೆ ಸಲ್ಲಿಸಬೇಕೆಂಬ ಆದೇಶ ಪತ್ರ ಕೈ ಸೇರುತ್ತಿದ್ದಂತೆ ಅತೃಪ್ತ ಶಾಸಕರು ಕಳ್ಳರಂತೆ ಓಡೋಡಿ ಬರ್ತಾರೆ. ಟಿವಿಯಲ್ಲಿ ನೋಡಿದ್ದೀರಲ್ವಾ? ಓಡೋಡಿ ಬರೋದನ್ನ. ಅವರಿಗೆ ನಾಚಿಕೆಯಾಗ್ಬೇಕು ಎಂದು ಅತೃಪ್ತ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಾದವರು ಜನರಿಗೋಸ್ಕರ ಶಾಸನ ಮಾಡಬೇಕು. ಕ್ಷೇತ್ರದ ಅಭಿವೃದ್ದಿ ಮಾಡಿ, ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಕೊಡಬೇಕು. ಆದರೆ, ಅಧಿಕಾರದ ದಾಹಕ್ಕೆ ಕಳ್ಳರ ರೀತಿ ಓಡೋಡಿ ಬರುವಂತಾಗಿದೆ. ಇದಕ್ಕೆಲ್ಲ ಕಾರಣ ಬಿಜೆಪಿಯವರು. ಬಿಜೆಪಿಯ ಅಧಿಕಾರ ದಾಹ. ಬಿಜೆಪಿಯವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಿದ್ದಾರೆ. ಅನಾಚಾರವಾಗಲಿ, ಭ್ರಷ್ಟಾಚಾರವಾಗಲಿ ಮಾಡಿ ಅಧಿಕಾರ ಹಿಡಿದರಾಯಿತು ಎಂಬುದು ಬಿಜೆಪಿ ನಡೆ ಅಂತಾ ಹರಿಹಾಯ್ದಿದ್ದಾರೆ.
ನಮಗೆ ಸಂಪೂರ್ಣ ವಿಶ್ವಾಸವಿದೆ. ನಮ್ಮ ಸರ್ಕಾರ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತದೆ. ಆ ಧೈರ್ಯದಿಂದಲೇ ಮುಖ್ಯಮಂತ್ರಿಯವರು ಬಹುಮತ ಸಾಬೀತುಪಡಿಸುವುದಾಗಿ ಸದನದಲ್ಲಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.