ಬಳ್ಳಾರಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತಪರ ಸಂಘಟನೆಗಳು, ವಿವಿಧ ಕನ್ನಡಪರ ಹೋರಾಟಗಾರರು ಇಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಈಗಾಗಲೇ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಆದರೇರಎ ಗಣಿಜಿಲ್ಲೆ ಬಳ್ಳಾರಿಯಲ್ಲಿ ಬಂದ್ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಕಾವೇರಿ ಹೋರಾಟಕ್ಕೆ ಬಳ್ಳಾರಿ ಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟು ತೆರೆದಿದ್ದು, ಆಟೋ, ಬಸ್ ಸಂಚಾರ ಲಭ್ಯವಿದೆ. ಕಾವೇರಿ ವಿಚಾರವಾಗಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡೋದಾಗಿ ಇಲ್ಲಿನ ಕನ್ನಡ ಪರ ಸಂಘಟನೆಗಳು ಹೇಳಿವೆ. ಇನ್ನೊಂದೆಡೆ ಈ ಹೋರಾಟದಲ್ಲಿ ಭಾಗಿಯಾಗಲ್ಲ ಎಂದು ಜಿಲ್ಲೆಯ ರೈತರು ಸ್ಪಷ್ಟವಾಗಿ ಹೇಳಿದ್ದಾರೆ.
ಕರವೇದಿಂದ ಹೆದ್ದಾರಿಯಲ್ಲಿ ಪ್ರತಿಭಟನೆ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕರವೇ ಕಾರ್ಯಕರ್ತರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು. ಹೊಸಪೇಟೆಗೆ ಹೋಗುವ ರಸ್ತೆಯಲ್ಲಿ ಟೈರ್ ಸುಡಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ. ಬಳಿಕ ರಾಜ್ಯ ಸರ್ಕಾರ, ಕಾವೇರಿ ನಿರ್ವಾಹಣಾ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಕೇವಲ ಬೆರಳಣಿಕೆಯ ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಹೆದ್ದಾರಿ ತಡೆಯಲು ಮುಂದಾದ ವೇಳೆ ಪೊಲೀಸರು ತಡೆದಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರವೇ ಮುಖಂಡ ಅಂಗಡಿ ಶಂಕರ್ ಮಾತನಾಡಿ, ನೆಲ ಜಲ ವಿಚಾರದ ರಕ್ಷಣೆಗೆ ಕರವೇ ಬದ್ಧವಾಗಿರುತ್ತದೆ. ಕಾವೇರಿ ನಮ್ಮದು, ಮಹದಾಯಿ ಮತ್ತು ತುಂಗಭದ್ರಾ ಕೂಡ ನಮ್ಮದೇ. ಈ ವಿಚಾರದಲ್ಲಿ ಭಿನ್ನಭಾವ ಇಲ್ಲ, ಕಾವೇರಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಬಂಗಾರಪ್ಪ ಅವರು ತೆಗೆದುಕೊಂಡ ನಿರ್ಣಯ ಈಗಿನ ಸರ್ಕಾರಕ್ಕೆ ತೆಗೆದುಕೊಳ್ಳಲು ಏಕೆ ಆಗಲಿಲ್ಲ. ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದರು.
ಬೆಂಗಳೂರು ಸ್ತಬ್ದ: ಇಂದು ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಬಹುತೇಕ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆ ಅಂಗಡಿ-ಮುಂಗಟ್ಟು, ಕೈಗಾರಿಕೆ ಹಾಗೂ ಸಿನಿಮಾ ಥಿಯೇಟರ್ ಸೇರಿದಂತೆ ಬಹುತೇಕ ಸೇವೆಗಳು ಸ್ತಬ್ಧವಾಗುವ ಸಾಧ್ಯತೆಯಿದೆ.
ಏನಿರುತ್ತೆ? : ಆಸ್ಪತ್ರೆಗಳು, ಔಷಧಿ ಮಳಿಗೆಗಳು, ಮೆಟ್ರೋ ರೈಲು, ಬ್ಯಾಂಕ್ಗಳು, ಕೆಎಸ್ಆರ್ಟಿಸಿ ಬಸ್, ಪೆಟ್ರೋಲ್ ಬಂಕ್ಗಳು, ಬಿಎಂಟಿಸಿ ಬಸ್ ಸೇವೆ ಇರಲಿದೆ.
ಏನಿರಲ್ಲ ? : ಕ್ಯಾಬ್, ಆಟೋ, ಓಲಾ- ಉಬರ್ ಕ್ಯಾಬ್, ಖಾಸಗಿ ಬಸ್ಗಳು, ಮಾಲ್ಗಳು, ಹೋಟೆಲ್ಗಳು, ಗೂಡ್ಸ್ ವಾಹನಗಳು, ಆಭರಣ ಮಳಿಗೆಗಳು, ಕೆಲ ಶಾಲಾ-ಕಾಲೇಜುಗಳು, ಚಿತ್ರಮಂದಿಗಳು, ಕೈಗಾರಿಕೆಗಳು, ಬೀದಿ ಬದಿ ಅಂಗಡಿಗಳು ಇರುವುದಿಲ್ಲ.
ಇದನ್ನೂ ಓದಿ: Karnataka Bandh: ಚಾಮರಾಜನಗರದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಅರೆಬೆತ್ತಲೆ ಉರುಳು ಸೇವೆ, ರಸ್ತೆ ತಡೆ