ಬಳ್ಳಾರಿ: ವಿಜಯನಗರವನ್ನು ಜಿಲ್ಲೆಯನ್ನಾಗಿಸುವ ಹೋರಾಟದ ನೆಪದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನರ್ಹ ಶಾಸಕ ಆನಂದ್ ಸಿಂಗ್ ಅವರು ಹೊರಟಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂಡಾಯವೆದ್ದಿದ್ದರು. ಜಿಂದಾಲ್ ಕಾರ್ಖಾನೆಗೆ ಭೂಮಿ ಪರಭಾರೆಗೆ ವಿರೋಧ ಹಾಗೂ ವಿಜಯನಗರವನ್ನ ಜಿಲ್ಲೆಯನ್ನಾಗಿಸುವುದು. ಆದರೀಗ ಬದಲಾದ ಸರ್ಕಾರದ ಅವಧಿಯಲ್ಲಿ ಜಿಂದಾಲ್ ಕಾರ್ಖಾನೆಗೆ ಭೂಮಿ ಪರಭಾರೆ ವಿಚಾರವನ್ನೇ ಕೈಬಿಟ್ಟ ಅವರು, ಕೇವಲ ವಿಜಯನಗರ ಜಿಲ್ಲೆಯನ್ನಾಗಿಸುವುದು ಅವರ ಪರಮ ಗುರಿ ಎಂಬಂತೆ ಕ್ಷೇತ್ರದಲ್ಲಿ ಬಿಂಬಿಸುವ ಮೂಲಕ ಮುಂದಿನ ಚುನಾವಣೆಯಲಿ ಮತದಾರರನ್ನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ.
ನಾಡಿನ ಪ್ರಮುಖ ಮಠಾಧೀಶರನ್ನು ಬೆಂಬಲ ಕೋರಿದ ಆನಂದ್ ಸಿಂಗ್ ಅವರು, ಈ ದಿನ ಜಿಂದಾಲ್ ಏರ್ ಪೋರ್ಟ್ ಮುಖೇನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿ ಮಾಡಲು ಹೊರಟಿದ್ದಾರೆ. ನಾನು ಜಿಂದಾಲ್ ಏರ್ ಪೋರ್ಟ್ ನಿಂದ ಯಾವತ್ತೂ ವಿಮಾನಯಾನ ಮಾಡಿಲ್ಲ ಎಂದು ಭೂಮಿ ಪರಭಾರೆ ವಿಚಾರವಾಗಿ ಕೈಗೆತ್ತಿಕೊಂಡ ಹೋರಾಟದ ಸಾರ್ವಜನಿಕ ಸಭೆಯಲ್ಲಿ ಘಂಟಾಘೋಷವಾಗಿ ಘೋಷಿಸಿದ್ದರು. ಆದರೀಗ ಅದೇ ಏರ್ ಪೋರ್ಟ್ನಿಂದಲೇ ಉಜ್ಜನಿ ಪೀಠದ ಸ್ವಾಮೀಜಿ ಅವರೊಂದಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ.
ಯಾರೊಬ್ಬರ ಬೆಂಬಲವೂ ಇಲ್ಲ:
ವಿಜಯನಗರ ಜಿಲ್ಲೆಯನ್ನಾಗಿಸುವ ಕೂಗು ಇಂದು, ನಿನ್ನೆಯದ್ದಲ್ಲ. ಇದು ಮಾಜಿ ಡಿಸಿಎಂ ದಿವಂಗತ ಎಂ.ಪಿ.ಪ್ರಕಾಶ್ ಅವರಿಂದಲೂ ಬಳುವಳಿಯಾಗಿ ಬಂದಂತಹ ಕೂಗು. ಆದರೆ, ಕಳೆದ ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾದ್ರೂ ಕೂಡ ಇದೇ ಆನಂದಸಿಂಗ್ ಯಾವುದೇ ಧ್ವನಿ ಎತ್ತಿರಲಿಲ್ಲ. ಮೂರನೇ ಬಾರಿಗೆ ಶಾಸಕರಾಗಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. ಹನ್ನೆರಡು ವರ್ಷಗಳಕಾಲ ಈ ಕುರಿತು ಧ್ವನಿ ಎತ್ತದ ಆನಂದಸಿಂಗ್, ಇಗ್ಯಾಕೆ ಅಂತಲೂ ತಿಳಿಯುತ್ತಿಲ್ಲ ಎಂದು ವಿಮರ್ಶಿಸಲಾಗುತ್ತಿದೆ.
ಕ್ಷೇತ್ರದ ಹಿಡಿತ ತಪ್ಪುವ ಭಯ:
ಹೊಸಪೇಟೆ ಬಿಜೆಪಿಯ ಸಂಘ - ಪರಿವಾರದ ನಾಯಕರ ಕಪಿಮುಷ್ಠಿಯಲ್ಲಿದ್ದ ಹಾಲಿ ಅನರ್ಹ ಶಾಸಕ ಆನಂದ್ ಸಿಂಗ್, ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಜಿಗಿದರು. ಕಳೆದ ಚುನಾವಣೆಯಲಿ ಗೆದ್ದು ಬಂದ ಆನಂದ್ ಸಿಂಗ್, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು, ಅದು ದೊರಕದ ಕಾರಣ ಅವಧಿ ಪೂರ್ಣಗೊಳ್ಳುವ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅದು ಈ ಮೇಲಿನ ಎರಡು ಬೇಡಿಕೆಗಳನ್ನು ಮುಂದಿಟ್ಟು ರಾಜೀನಾಮೆ ನೀಡಿರುವುದಾಗಿ ವಿಜಯನಗರ ಕ್ಷೇತ್ರದಲ್ಲಿ ಬಿಂಬಿಸಿದ್ದರು. ವಿಜಯನಗರ ಜಿಲ್ಲೆಯ ಕೂಗಿಗೆ ಆ ಕ್ಷೇತ್ರದ ಮುಖಂಡರು, ಸಾರ್ವಜನಿಕರ ಬೆಂಬಲ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಆನಂದಸಿಂಗ್ ಮಾತ್ರ ಪ್ರಬಲ ಹೋರಾಟ ಮಾಡುತ್ತಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.