ಬಳ್ಳಾರಿ: ರಾಜ್ಯ ಸರ್ಕಾರವು ಜಿಂದಾಲ್ ಉಕ್ಕು ಕಾರ್ಖಾನೆಗೆ ಸುಮಾರು 3,667 ಎಕರೆ ಭೂಮಿ ಪರಾಭಾರೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಜೂ. 15ರಂದು ಜಿಂದಾಲ್ ಕಾರ್ಖಾನೆ ಎದುರು ಕೈಗೊಂಡಿದ್ದ ಮುತ್ತಿಗೆಯಲ್ಲಿ ಪಾಲ್ಗೊಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲಿಗರಿಗೆ ಜಿಲ್ಲೆಯ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದಾರೆ.
ಅಧಿನಿಯಮ- 107ರನ್ವಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದಡಿ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದು, ವಾಟಾಳ್ ನಾಗರಾಜ್ ಸಹಚರರಾದ ಯರಿಸ್ವಾಮಿ, ಯುಸೂಫ್, ವೆಂಕಟೇಶ, ಬಿ. ಸ್ವಾಮಿ, ಮಲ್ಲಿಕಾರ್ಜುನ, ಶಿವಕುಮಾರ, ವೀರೇಶ, ರಾಜ, ರವಿ ಕುಮಾರ , ಬಿ.ಆರ್. ಕೃಷ್ಣ ಸೇರಿದಂತೆ ಜಿಲ್ಲೆಯ ಸಂಡೂರು ಮತ್ತು ಬಳ್ಳಾರಿ, ಹೊಸಪೇಟೆ ತಾಲೂಕಿನ ಭಾಗದ ಹೋರಾಟಗಾರರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಅಲ್ಲದೇ, ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಿ ಮೂರು ಲಕ್ಷ ರೂ.ಗಳ ಬಾಂಡ್ ನೀಡಬೇಕು. ಉತ್ತಮ ವ್ಯಕ್ತಿಯೊಬ್ಬರ ಸಾಕ್ಷಿ ನೀಡಬೇಕು. ಹಾಗೂ ಇನ್ಮುಂದೆ ಯಾವುದೇ ಸಮಾವೇಶ, ರಸ್ತೆ ತಡೆಯಂತಹ ಪ್ರತಿಭಟನೆಯನ್ನು ಪರವಾನಗಿ ಪಡೆಯದೆ ಮಾಡಲ್ಲವೆಂದು ಮುಚ್ಚಳಿಕೆ ಪತ್ರ ಬರೆದು ಕೊಡಬೇಕು. ಮುಂದಿನ ಒಂದು ವರ್ಷಕ್ಕೆ ಅನ್ವಯವಾಗುವಂತೆ ಆ ಮುಚ್ಚಳಿಕೆ ಪತ್ರ ಇರಬೇಕು ಎಂದು ದಂಡಾಧಿಕಾರಿಗಳು ಸೂಚಿಸಿದ್ದಾರೆ.
ಘಟನೆಯ ವಿವರ:
ಜಿಂದಾಲ್ ಕಾರ್ಖಾನೆ ಮುತ್ತಿಗೆ ಹಾಕುವ ವೇಳೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರ ಪರವಾನಗಿ ಪಡೆಯದೆ, ಏಕಾಏಕಿ ಆ ಕಾರ್ಖಾನೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಯಾವುದೇ ರೀತಿಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಉಂಟಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ತೋರಣಗಲ್ಲು ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಇನ್ನಿತರೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಕಾರಿನಿಂದ ಬಂದಿಳಿದ ವಾಟಾಳ್ ನಾಗರಾಜ್ ಹಾಗೂ ಸಹಚರರು ನೇರವಾಗಿ ಜಿಂದಾಲ್ ಕಾರ್ಖಾನೆ ಮುಂದೆ ನಿಂತುಕೊಂಡರು. ತೋರಣಗಲ್ಲಿನ ಪೊಲೀಸರು ತಡೆದು, ಬ್ಯಾರಿಕೇಡ್ ಒಳಗೆ ನಿಂತುಕೊಂಡು ಪ್ರತಿಭಟಿಸುವಂತೆ ಸೂಚಿಸಿದ್ದರು. ನಿಮ್ಮ ಕೆಲ್ಸ ನೀವ್ ಮಾಡಿ. ನಾ ಎಲ್ಲ ಮಾತನಾಡಿರುವೆ ಎಂದು ವಾಟಾಳ್ ನಾಗರಾಜ್ ಅವರ ಕಡೆಯಿಂದ ಮಾತು ತೂರಿ ಬಂದಿತ್ತು.
ಪೊಲೀಸ್ ಸಿಬ್ಬಂದಿ ಮಾತನ್ನೇ ಲೆಕ್ಕಿಸದ ವಾಟಾಳ್ ನಾಗರಾಜ್ ಮತ್ತು ಸಹಚರರು ಜಿಂದಾಲ್ ಉಕ್ಕು ಕಾರ್ಖಾನೆ ಗೇಟ್ ಬಳಿ ಬರಲು ಪ್ರಯತ್ನಿಸಿದ್ದರು. ಆಗ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಅನ್ನು ಅಡ್ಡಲಾಗಿ ಸರಿಸಿದರು. ಆ ಬ್ಯಾರಿಕೇಡನ್ನು ತಳ್ಳಿ ಜಿಂದಾಲ್ ಕಾರ್ಖಾನೆ ಪ್ರವೇಶದ್ವಾರ ಪ್ರವೇಶಿಸಲು ಮುಂದಾದಾಗ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ಅಲ್ಲಿಂದ ಕರೆದೊಯ್ದಿದ್ದರು.
ಇದಕ್ಕೂ ಮುಂಚೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಅವರು ಪ್ರತಿಭಟನೆ ಅಥವಾ ಮುತ್ತಿಗೆಯ ಪರವಾನಗಿ ಪಡೆಯಿರಿ ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ಅಧ್ಯಕ್ಷ ಯರಿಸ್ವಾಮಿಯವರಿಗೆ ಸೂಚಿಸಿದ್ದರು.
ಪರವಾನಗಿ ಕಡ್ಡಾಯ:
ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಬಾರದೆಂಬ ಉದ್ದೇಶದೊಂದಿಗೆ ಹೋರಾಟ, ಪ್ರತಿಭಟನೆ ಇರಲಿ, ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಆದರೆ, ಜಿಂದಾಲ್ ಕಾರ್ಖಾನೆ ಮುತ್ತಿಗೆ ಹಾಕುವ ವಿಚಾರದಲ್ಲಿ ವಾಟಾಳ್ ನಾಗರಾಜ್ ಸಹಚರರು ಪರವಾನಗಿಯನ್ನು ಹೊಂದಿರದ ಕಾರಣ ಸಂಡೂರು ತಹಶೀಲ್ದಾರರು ಸಮನ್ಸ್ ಜಾರಿಗೊಳಿಸಿದ್ದಾರೆ. ತಹಶೀಲ್ದಾರ್ ಅವರ ಸೂಚನೆಯ ಮೇರೆಗೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಶಾಂತಿಭಂಗ ಹಾಗೂ ಕಾನೂನು ವ್ಯವಸ್ಥೆ ಹದಗೆಡುವ ಆರೋಪದಡಿ ದೂರು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.